ಶಿವಾನಂದ ಹಿರೇಮಠ ಗದಗ
ಕೋಟ್ಯಂತರ ರೂ. ಮೊತ್ತದ ನಕಲಿ ಠರಾವು ಪ್ರಕರಣದಿಂದ ಕುಖ್ಯಾತಿ ಪಡೆದಿದ್ದ ಗದಗ ನಗರಸಭೆ ಆಗಸ್ಟ್ ಒಂದೇ ತಿಂಗಳಲ್ಲೇ ಅಂದಾಜು 9 ಕೋಟಿ ಮೊತ್ತದ ನೂರಕ್ಕೂ ಹೆಚ್ಚು ಕಾಮಗಾರಿಗಳ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆ ನಡೆಸಿದ್ದು ಬೆಳಕಿಗೆ ಬಂದಿದೆ. ನಗರಸಭೆಯಲ್ಲಿನ ಶಾಸಕಾಂಗ ಮತ್ತು ಕಾರ್ಯಾಂಗ, ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಒಳ ಹೊಂದಾಣಿಕೆಯಿಂದ ಆಡಳಿತಾತ್ಮಕ ವಿಷಯದಲ್ಲಿ ಕಾನೂನು ಬಾಹಿರ ಪ್ರಕ್ರಿಯೆಗಳು ಜರುಗುತ್ತಿದೆ.
ನಗರಸಭೆ ನಡಾವಳಿಗಳನ್ನು ಪೌರಾಯುಕ್ತರು ಮತ್ತು ಅಧ್ಯಕ್ಷರು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾಮಾನ್ಯ ಸಭೆ ಕರೆಯದೇ, ಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ, ಸಭೆಯ ಒಪ್ಪಿಗೆ ಪಡೆಯದೇ ಮತ್ತು ಸ್ಥಾಯಿ ಸಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ ಕೋಟ್ಯಂತರ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಜನರ ತೆರಿಗೆ ಹಣ ಬೇಕಾಬಿಟ್ಟಿ ಪೋಲಾಗುತ್ತಿದೆ ಎಂಬ ಅಸಮಧಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಕೆಲವಡೆ ಕಾಮಗಾರಿಗೆ ಗುದ್ದಲಿ ಪೂಜೆಯೂ ಜರುಗಿದ್ದು ವಿಶೇಷ.
ನಗರಸಭೆ ನಡಾವಳಿಗಳ ಉಲ್ಲಂನೆ ಬೆಳಕಿಗೆ ಬರುತ್ತಿದಂತೆ ಬುಧವಾರ ಸಂಜೆ ಏಕಾಏಕಿ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಪೌರಾಯುಕ್ತರು ಮತ್ತು ಅಧ್ಯಕ್ಷರ ಕ್ರಮವನ್ನು ಉಪಾಧ್ಯಕ್ಷರೇ ವಿರೋಧಿಸಿದ್ದು ಬಿಜೆಪಿಗೆ ಮತ್ತಷ್ಟು ಮುಜುಗುರು ತಂದೊಡ್ಡಿದೆ.
ಏನಿದು ಪ್ರಕರಣ:
ಆಂತರಿಕ ಒಪ್ಪಂದದಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೂ ನೂತನ ಅಧ್ಯಕ್ಷರ ಆಯ್ಕೆ ಅಥವಾ ಮುಂದುವರಿಕೆಯ ನಡಾವಳಿಗೆ ನಗರಸಭೆ ಸದಸ್ಯರು ಒಪ್ಪಿಗೆ ಸೂಚಿಸಬೇಕು. ಹಾಗೂ ನಗರದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೂ ನಗರಸಭೆಯ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಬೇಕು. ಆದರೆ, ಕಳೆದ ಎರಡ್ಮೂರು ತಿಂಗಳಿಂದ ನಗರಸಭೆ ಸಾಮಾನ್ಯ ಸಭೆ ಜರುಗೇ ಇಲ್ಲ. ಹೀಗಿದ್ದರೂ, ಆ.14 ಮತ್ತು 16 ರಂದು ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕೆಲ ಕಾಮಗಾರಿಗಳಿಗೆ ಗುದ್ದಲಿ ಪೂಜೆಯೂ ಜರುಗಿದೆ. ಈ ಕಾನೂನು ಬಾಹಿರ ಪ್ರಕ್ರಿಯೆ ಮಂಗಳವಾರ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಲ್ಲಿ ಕೆಲವರು ಬುಧವಾರ ಸಂಜೆ ಸಾಮಾನ್ಯ ಸಭೆ ಜರಗಿಸುವಂತೆ ಪೌರಾಯುಕ್ತರನ್ನು ಒಪ್ಪಿಸಿದ್ದಾರೆ. ನಗರಸಭೆಯ ಎಲ್ಲ ಸದಸ್ಯರಿಗೆ ರಾತ್ರೋ ರಾತ್ರಿ ಸಾಮಾನ್ಯ ಸಭೆಯ ನೋಟೀಸ್ ಹಂಚಲಾಗಿದೆ. ಈ ಪ್ರಕ್ರಿಯೆಯನ್ನು ನಗರಸಭೆ ಉಪಾಧ್ಯೆ ಸುನಂದಾ ಬಾಕಳೆ ವಿರೋಧಿಸಿದ್ದಾರೆ.
ಜಿಲ್ಲಾಧಿಕಾರಿಗೆ ದೂರು:
ಜಿಲ್ಲಾಧಿಕಾರಿಗೆ ದೂರು ನೀಡಿರುವ ಉಪಾಧ್ಯೆ ಸುನಂದಾ ಬಾಕಳೆ ಸಾಮಾನ್ಯ ಸಭೆ ಕಾನೂನು ಬದ್ಧವಲ್ಲ ಎಂದು ಆರೋಪಿಸಿದ್ದಾರೆ. "ಆ.30 ರಂದು ಸಾಮಾನ್ಯ ಸಭೆ ಜರುಗಿಸಲು ಆ.29 ರಂದೇ ನಿರ್ಧರಿಸಿ ರಾತ್ರಿ 10 ಗಂಟೆಗೆ ನೋಟೀಸ್ ಹಂಚಲಾಗಿದೆ. ಮುನ್ಸಿಪಲ್ ಕಾಯಿದೆ 1964 ಕಲಂ 48ರ ಉಲ್ಲಂನೆ ಆಗಿದೆ. ಹಾಗಾಗಿ ಸಾಮಾನ್ಯ ಸಭೆ ಮುಂದೂಡಬೇಕೆಂದು ಪತ್ರದ ಮೂಲಕ ದೂರು ನೀಡಿದ್ದಾರೆ.
ತರಾತುರಿ ಟೆಂಡರ್ ಏಕೆ?
ಆ.31 ರಂದು ನಗರಸಭೆ ಪೌರಾಯುಕ್ತರು ನಿವೃತ್ತಿ ಆಗಲಿದ್ದು, ಹೊಸ ಪೌರಾಯುಕ್ತರ ಅಧಿಕಾರ ಹಸ್ತಾಂತರಕ್ಕೆ ಕಾಲಾವಕಾಶ ಬೇಕು. ಮತ್ತು ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಬೀತಿ ಎದುರಾಗಿದೆ. ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದರೆ ಬಿಜೆಪಿಯ ಬಲ ಕುಗ್ಗುತ್ತದೆ ಎಂಬ ಭಯ ಬಿಜೆಪಿ ಸದಸ್ಯರಲ್ಲಿ ಕಾಡುತ್ತಿದೆ. ಹೀಗಾಗಿ, ಪ್ರಭಾವಿ ಕಾಂಗ್ರೆಸ್ ಸದಸ್ಯರ ಜತೆ ಬಿಜೆಪಿ ಸದಸ್ಯರ ಹೊಂದಾಣಿಕೆಯಿಂದ ಕೋಟ್ಯಂತರ ಮೊತ್ತದ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಹಿನ್ನೆಲೆ ಭ್ರಷ್ಟಾಚಾರದ ವಾಸನೆ ಸುಳಿಯುತ್ತಿದೆ. ಹಾಗೂ ನಗರಸಭೆಯಲ್ಲಿ ಸ್ಥಾಯಿ ಸಮಿತಿಯ ಅಸ್ತಿತ್ವವನ್ನು ಹೋಗಲಾಡಿಸಲು ಕೆಲ ಪ್ರಭಾವಿ ಸದಸ್ಯರು ಸಾಮಾನ್ಯ ಸಭೆ ಜರುಗಿಸಲು ಹಿಂದಡಿ ಇಟ್ಟಿದ್ದಾರೆ ಎನ್ನಲಾಗಿದೆ. ಸಂಪೂರ್ಣ ಬೆಳವಣಿಗೆ ಗಮನಿಸಿದರೆ ಪೂರ್ವ ನಿಯೋಜಿತ, ದುರುದ್ದೇಶದ ಪ್ರಕ್ರಿಯೆ ಇದಾಗಿದೆ ಎಂದು ಮೇಲ್ನೋಟಕ್ಕೆ ಸಾಭೀತಾಗುತ್ತಿದೆ.
ಕೋಟ್:
ಒಂದು ವಾರಕ್ಕೂ ಮೊದಲೇ ನೋಟೀಸ್ ನಿಡಬೇಕಾಗಿದ್ದು ನಿಯಮಾವಳಿ. ಸಭೆ ಜರುಗುವುದನ್ನು ವಿರೋಧಿಸಿ ಉಪಾಧ್ಯಕ್ಷರು ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿ ಸಾಮಾನ್ಯ ಸಭೆ ನಡೆಸುವ ಕುರಿತು ಅಭಿಪ್ರಾಯ ಕೇಳಿದ್ದಾರೆ. ನಿಯಮ ಪ್ರಕಾರ ಸಭೆ ನಡೆಸಲು ಸಾಧ್ಯವಿಲ್ಲ.
-ರಮೇಶ ಸುಣಗಾರ, ಪೌರಾಯುಕ್ತರು ಗದಗ ನಗರಸಭೆ