ಪ್ರಕಾಶ್ ಮಂಜೇಶ್ವರ, ಮಂಗಳೂರು
ಆಕರ್ಷಕ 36 ದ್ವೀಪಗಳ ಸಮೂಹವನ್ನು ಹೊಂದಿರುವ ಲಕ್ಷದ್ವೀಪಕ್ಕೆ ಕರಾವಳಿಯ ಬಂದರು ನಗರ ಮಂಗಳೂರಿನಿಂದ ನೇರ ಪ್ರಯಾಣಿಕರ ಹಡಗು ಪುನರಾರಂಭ ಅವಕಾಶ ಮತ್ತೆ ತೆರೆದುಕೊಂಡಿದೆ!
ಮಂಗಳೂರು ಹಳೇ ಬಂದರಿನಲ್ಲಿ 65 ಕೋಟಿ ರೂ.ವೆಚ್ಚದಲ್ಲಿ ಲಕ್ಷದ್ವೀಪಕ್ಕಾಗಿಯೇ ಮೀಸಲಾದ ಹೊಸ ಜೆಟ್ಟಿಗೆ ಟೆಂಡರ್ ಕರೆಯಲಾಗಿದೆ. ಮಾಲ್ದೀವ್ಸ್ ಜತೆ ಭಾರತದ ರಾಜತಾಂತ್ರಿಕ ಸಂಬಂಧ ಹಳಸಿದ ಬಳಿಕ ನಿಸರ್ಗ ಸೌಂದರ್ಯಕ್ಕೆ ಜಗತ್ತಿನ ಗಮನ ಸೆಳೆದಿರುವ ಭಾರತದ ಆಧೀನದ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ಕುರಿತು ಭಾರತ ಹೆಚ್ಚು ಲಕ್ಷೃ ವಹಿಸಿದೆ. ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆಯೂ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಪ್ರಸ್ತಾವಿಸಿದ್ದರು.
ಯೋಜನೆ ಸಂಬಂಧಿಸಿ ಕರಾವಳಿ ನಿರ್ಬಂಧಿತ ವಲಯ (ಸಿಆರ್‌ಜಡ್) ಮತ್ತು ಪರಿಸರ ವಿಭಾಗದ ನಿರಾಕ್ಷೇಪಣಾ ಪತ್ರದ ಪ್ರಸ್ತಾವನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ಕಳುಹಿಸಲಾಗಿದೆ. ರಾಜ್ಯದ ನಿರಾಕ್ಷೇಪಣಾ ಪತ್ರ ಬಳಿಕ ಕೇಂದ್ರದ ಪತ್ರ ದೊರೆಯಬೇಕಾಗಿದೆ. ಯೋಜನೆ ಸಂಬಂಧಿಸಿ ಸಾರ್ವಜನಿಕರ ಅಹವಾಲು ಸ್ವೀಕಾರವೂ ಆಗಬೇಕಾಗಿದೆ ಎಂದು ಇಲಾಖೆ ಮೂಲ ತಿಳಿಸಿದೆ.
.........
ಕರೊನಾ ಬಳಿಕ ಪ್ರಯಾಣಿಕರ ಶಿಪ್ ಇಲ್ಲ
ಕರೊನಾ ಬಳಿಕ ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಸರಕು ಹಡಗು ಸಂಚರಿಸುತ್ತಿಲ್ಲ. ಮಂಗಳೂರು ಹಳೇ ಬಂದರಿನಲ್ಲಿ ನೀರಿನ ಆಳ ಕಡಿಮೆ ಇರುವುದು ಮತ್ತು ಭಯ ಪ್ರದೇಶಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇರುವ ಹಲವು ನಿರ್ಬಂಧ ಈ ಮಾರ್ಗ ಜನರ ಪ್ರಯಾಣಕ್ಕೆ ಪ್ರತಿಕೂಲವಾಗಲು ಮುಖ್ಯ ಕಾರಣ. ಭಯ ಪ್ರದೇಶಗಳ ನಡುವೆ ಸಂಚರಿಸುವ ಹಡಗುಗಳ ಪ್ರಯಾಣದ ವ್ಯವಸ್ಥೆಯನ್ನು ಪೂರ್ಣವಾಗಿ ಲಕ್ಷದ್ವೀಪ ಅಭಿವೃದ್ಧಿ ನಿಗಮ (ಎಲ್‌ಡಿಸಿಎಲ್) ನಿರ್ವಹಿಸುತ್ತಿದೆ. ಹೊರಭಾಗದ ಜನರು ಲಕ್ಷದ್ವೀಪ ಸಂಚರಿಸುವ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಯಾಣಿಕರ ಬಗ್ಗೆ ಪರಿಶೀಲನೆ ನಡೆಯಬೇಕು. ಬಳಿಕ ಎಲ್‌ಡಿಸಿಎಲ್ ಒಪ್ಪಿಗೆ ಪಡೆಯಬೇಕು. ಈ ಹಿಂದೆ ಪ್ರಯಾಣಿಸುವವರು ಏಜೆಂಟರ ಮೂಲಕ ಕೊಚ್ಚಿನ್‌ನಲ್ಲಿರುವ ಎಲ್‌ಡಿಸಿಎಲ್ ಕಚೇರಿಯಿಂದ ಒಪ್ಪಿಗೆ ಪಡೆಯುತ್ತಿದ್ದರು. ಮಂಗಳೂರಿನಲ್ಲಿಯೇ ಈ ಕಚೇರಿ ಆರಂಭವಾದರೆ ಪ್ರಯಾಣ ವ್ಯವಸ್ಥೆ ಸುಲಭವಾಗಲಿದೆ.
.........
ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಪ್ರಯಾಣಿಕರ ಹಡಗು ಪುನರಾರಂಭಗೊಂಡರೆ ಮಂಗಳೂರು ಭಾಗದ ವ್ಯಾಪಾರ, ಉದ್ಯಮ, ಕೈಗಾರಿಕೆಗಳಿಗೆ ಹೆಚ್ಚಿನ ಲಾಭವಾಗಲಿದೆ. ಆದ್ದರಿಂದ ಈ ಯೋಜನೆ ಪೂರ್ಣ ಆದ್ಯತೆಯಲ್ಲಿ ನಡೆಯಬೇಕು.