- ನಗರಸಭೆ ಇತಿಹಾಸದಲ್ಲೇ ಮೊದಲಬಾರಿ ಪೌರಾಯುಕ್ತ ಓರ್ವರಿಂದ ಸಮಜಾಯಿಷಿ ಪತ್ರ
ಶಿವಾನಂದ ಹಿರೇಮಠ ಗದಗ
ಬೀದಿ ದೀಪ ನಿರ್ವಹಣೆ ಗುತ್ತಿಗೆ ಪ್ರಕ್ರಿಯೆಯಲ್ಲಿ ನಿಯಮ ಬಾಹಿರವಾಗಿ ಸಾಮಾನ್ಯ ಸಭೆ ನಡಾವಳಿ ಸೃಷ್ಟಿಸಿ ಸ್ಥಳೀಯ ಸವಿಜ್ಯೋತಿ ಎಲೆಕ್ಟ್ರಿಕ್ ಅವರಿಗೆ ವಾರ್ಷಿಕ 1.37 ಕೋಟಿ ಗುತ್ತಿಗೆ ನೀಡಿದ್ದ ಪ್ರಕರಣ ಹಿನ್ನೆಲೆ ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಗದಗ ನಗರಸಭೆಯು ಲಿಖಿತ ಮೂಲಕ ಸಮಜಾಯಿಷಿ, ತಪ್ಪೊಪ್ಪಿಗೆ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.
ಲಿಖಿತ ಹೇಳಿಕೆ ಮೂಲಕ ಪರೋಕ್ಷವಾಗಿ ಗುತ್ತಿಗೆ ನೀಡುವ ಟೆಂಡರ್ ನಲ್ಲಿ ಪೌರಸಭೆ ಅಧಿನಿಯಮ ಉಲ್ಲಂಘನೆ ಆಗಿದೆ ಎಂಬುದಕ್ಕೆ ಸ್ಪಷ್ಟೀಕರಣ ದೊರೆತಂತಾಗಿದೆ. ನಿಯಮ ಬಾಹಿರ ಟೆಂಡರ್ ಪ್ರಕ್ರಿಯೆಗೆ ಜಿಲ್ಲಾಡಳಿತ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಅಕ್ರಮವನ್ನು ಒಂದು ಹಂತದಲ್ಲಿ ತಡೆಯಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸುವುದು ಬಾಕಿ ಇದೆ.
ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಗುತ್ತಿಗೆ ದಾಖಲಾತಿಗಳನ್ನು ಪರಿಶೀಲಿಸಿದ ನಗರಾಭಿವೃದ್ಧಿ ಕೋಶವು ದಾಖಲೆಗಳಲ್ಲಿ ಹಲವು ಲೋಪ ದೋಷಗಳನ್ನು ಕಂಡು ಹಿಡಿದಿತ್ತು. ಲಿಖಿತ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡುವಂತೆ ನಗರಸಭೆಗೆ ಎಚ್ವರಿಕೆ ನೀಡಿತ್ತು. ಈ ಹಿನ್ನೆಲೆ ಶುಕ್ರವಾರ ಜಿಲ್ಲಾಡಳಿತಕ್ಕೆ ಅನಿವಾರ್ಯ ಎಂಬಂತೆ ಸಮಜಾಯಿಷಿ ಪತ್ರವನ್ನು ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಅವರು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.
ಹೇಳಿಕೆ ಸಾರಾಂಶ: ಜಿಲ್ಲಾಡಳಿತ ಮೂಲಗಳ ಪ್ರಕಾರ ಪೌರಾಯುಕ್ತ ಗಂಗಪ್ಪ ಎಂ. ಅವರ ಲಿಖಿತ ಹೇಳಿಕೆ ಸಾರಾಂಶ ಹೀಗಿದೆ. 'ಕೆಲಸದ ಒತ್ತಡದಲ್ಲಿ ನನ್ನ ನೆದರುಚೂಕಿನಿಂದ ಗುತ್ತಿಗೆ ನೀಡುವ ಕಾರ್ಯಾನುದೇಶಕ್ಕೆ ಸಹಿ ಮಾಡಲಾಗಿದೆ. ನಗರಸಭೆಯ ಜೂನಿಯರ್ ಇಂಜಿನಿಯರ್ ಹುಣಸಿಮರದ ಹಾಗೂ ಕಾರ್ಯಪಾಲಕ ಇಂಜಿನಿಯರಿಂಗ್ ಎಚ್. ಬಂಡಿವಡ್ಡರ ಹಾಗೂ ಕೇಸ್ ವರ್ಕರ್ ಅವರಿಗೆ ಪ್ರಕರಣ ಕುರಿತು ವರದಿ ನೀಡುವಂತೆ ಶೋಕಾಸ್ ನೋಟಿಸ್ ನೀಡಿದ್ದೇನೆ. ಕಾರ್ಯಾನುದೇಶಕ್ಕೂ ಪೂರ್ವದಲ್ಲಿ ಠರಾವು ಸಂಖ್ಯೆ 263 ರ ಸಾಮಾನ್ಯ ನಡಾವಳಿ ಕುರಿತು ಇಂಜಿನಿಯರಿಂಗ್ ವಿಭಾಗ ಪರಿಶೀಲನೆ ನಡೆಸಿದೆಯೇ ಎಂಬುದರ ಕುರಿತು ವರದಿ ಪಡೆಯಬೇಕಿದೆ. ಇಂಜಿನಿಯರಿಂಗ್ ವಿಭಾಗ ವರದಿ ಆಧರಿಸಿ ನಗರಾಭಿವೃದ್ಧಿ ಕೋಶಕ್ಕೆ ವರದಿ ನೀಡಲಾಗುವುದು' ಎಂದು ಪತ್ರದಲ್ಲಿ ಸಮಜಾಯಿಷಿ ನೀಡಲಾಗಿದೆ. ಗುತ್ತಿಗೆ ಅಕ್ರಮದಲ್ಲಿ ಇಂತದೊದ್ದು ಪತ್ರವ್ಯವಹಾರ ನಗರಸಭೆಯಲ್ಲಿ ಇದೇ ಮೊದಲಬಾರಿ ಎನ್ನಲಾಗಿದ್ದು, ನಗರಸಭೆ ಆವರಣದಲ್ಲಿ ನಿರಸ ಮೌನ ಆವರಿಸಿದೆ.
ಅಂಕುಶವಿಲ್ಲ: ಬೀದಿ ದೀಪ ಗುತ್ತಿಗೆ ಅಕ್ರಮದಲ್ಲಿ ನಗರಸಭೆ ಆಡಳಿತಾಧಿಕಾರಿಗಳ ಮೇಲೆ ನಗರಸಭೆ ಆಡಳಿತ ಮತ್ತು ವಿರೋಧ ಪಕ್ಷದ ಪ್ರಭಾವಿ ಜನಪ್ರತಿನಿಧಿಗಳು ಕಾರ್ಯಾನುದೇಶಕ್ಕೆ ಸಹಿ ಮಾಡುವಂತೆ ಒತ್ತಡ ಹೇರಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಗುತ್ತಿಗೆ ಪ್ರಕ್ರಿಯೆಯಲ್ಲಿ ಶಾಸಕಾಂಗ ರಚಿಸಿ ನಡಾವಳಿ ಪರಿಶೀಲನೆ ಮಾಡಲು ಕಾರ್ಯಾಂಗ ವಿಫಲವಾಯಿತು ಎಂಬುದು ಸ್ಪಷ್ಟವಾಗಿದೆ.
ಅಧ್ಯಕ್ಷರ ಕರ್ತವ್ಯಲೋಪ:
ಅ.30, 2023 ರಂದು ಜರುಗಿದ ಬೀದಿ ದೀಪ ನಿರ್ವಹಣೆ ಗುತ್ತಿಗೆ ನೀಡುವ ಸಂಬಂಧ ಸಾಮಾನ್ಯ ಸಭೆ ನಡಾವಳಿಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ಸಹಿ ಮಾಡಿದ್ದಾರೆ. ಸ್ಥಳೀಯರಿಗೇ ಗುತ್ತಿಗೆ ನೀಡುವ ಉದ್ದೇಶದಿಂದ ಈ ನಡಾವಳಿ ಬರೆಯಲಾಗಿದ್ದು, ಕೆಟಿಪಿಪಿ ನಿಯಮವು ಜನಪ್ರತಿನಿಧಿಗಳಿಂದಲೇ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ.
ಪ್ರಕರಣದಿಂದ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮುಜುಗರ ಉಂಟಾಗಿದೆ. ಅಲ್ಲಲ್ಲಿ ಗೌಪ್ಯಸಭೆಗಳನ್ನು ನಡೆಸಿ ಮುಂದಿನ ನಡೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಮುಜುಗರ ದಿಂದ ನಗರಸಭೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸುತ್ತಿಲ್ಲ. ಈ ಹಿನ್ನೆಲೆ ನಗರಸಭೆ ಆವರಣದಲ್ಲಿ ಗುಸುಗುಸು ಮಾತುಗಳ ಕೇಳಿ ಬರುತ್ತಿವೆ. ಎಲ್ಲವೂ ಗೌನ ಮತ್ತು ಗೌಪ್ಯ ಎಂಬ ಸನ್ನಿವೇಶ ನಗರಸಭೆ ಆವರಣದಲ್ಲಿ ಸೃಷ್ಟಿ ಆಗಿದೆ.
ಕೋಟ್:
ಬೀದಿ ದೀಪನಿರ್ವಹಣೆ ಗುತ್ತಿಗೆ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡುವಂತೆ ನಗರಾಭಿವೃದ್ಧಿ ಕೋಶಕ್ಕೆ ಆದೇಶ ಮಾಡಲಾಗಿದೆ. ನಗರಸಭೆ ಪೌರಾಯುಕ್ತರ ಲಿಖಿತ ಹೇಳಿಕೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು - ವೈಶಾಲಿ ಎಂ.ಎಲ್. ಜಿಲ್ಲಾದಿಕಾರಿ