ಜಿಲ್ಲೆ

ಬಸ್​ ಇಲ್ಲದೆ ಆಟೋ ಹತ್ತಿದ ವಿದ್ಯಾರ್ಥಿಗಳು; ಹತ್ತು ಮಂದಿ ಇದ್ದ ರಿಕ್ಷಾ ಪಲ್ಟಿ...

Webdesk - Ravikanth

ಹಾವೇರಿ: ರಾಜ್ಯದ ಹಲವೆಡೆ ವಿದ್ಯಾರ್ಥಿಗಳ ಗುಂಪಿನ ನಡುವೆ ಹಿಜಾಬ್​ ಹಾಗೂ ಕೇಸರಿ ಶಾಲಿನ ವಿಚಾರವೇ ದೊಡ್ಡ ಸಂಗತಿಯಾಗಿ ಸಂಘರ್ಷ ಉಂಟಾಗಿದೆ. ಆದರೆ ಇಲ್ಲೊಂದು ಕಡೆ ಶಾಲೆಗೆ ಹೋಗಿ ಬರಲು ಸರಿಯಾದ ಬಸ್​ ಇಲ್ಲದೆ ಹತ್ತು ವಿದ್ಯಾರ್ಥಿಗಳು ಒಂದೇ ಆಟೋಗೆ ಹತ್ತಿ ಪ್ರಯಾಣಿಸಿದ್ದು, ಸ್ವಲ್ಪ ದೂರ ಹೋಗುವಷ್ಟರಲ್ಲೇ ಆಟೋ ಪಲ್ಟಿಯಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಬೆಳಗಾಲಪೇಟೆ ಗ್ರಾಮದ ಉರ್ದು ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶಾಲೆ ಬಿಟ್ಟ ನಂತರ ಕಂಚಿನೆಗಳೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

ಗಾಯಗೊಂಡವರೆಲ್ಲರೂ ಕಂಚಿನೆಗಳೂರು ಗ್ರಾಮದ ವಿದ್ಯಾರ್ಥಿಗಳು. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದೆ.

ಶಾಲೆಗೆ ಹೋಗಿ ಬರಲು ಸಮಯಕ್ಕೆ ಸರಿಯಾಗಿ ಬಸ್​ ಸೌಲಭ್ಯ ಇಲ್ಲದ ಕಾರಣ ಈ ವಿದ್ಯಾರ್ಥಿಗಳು ಆಟೋ ರಿಕ್ಷಾದಲ್ಲಿ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.