ದಾವಣಗೆರೆ: ಎರಡು ಯಂತ್ರ ಚಾಲಿತ ವಾಹನಗಳ ಡಿಕ್ಕಿ-ಅಪಘಾತ ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಎತ್ತಿನ ಗಾಡಿ ಮತ್ತು ಆಮ್ನಿ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ದಾವಣಗೆರೆ ಸೊರಟೂರು ಚಾನಲ್ ಬಳಿ ಈ ಅಪಘಾತ ಜರುಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಹೊನ್ನಾಳಿ-ಶಿಕಾರಿಪುರ ರಸ್ತೆಯ ಸೊರಟೂರು ಚಾನಲ್ ಬಳಿ ನಡೆದ ಈ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಗಾಗಿವೆ. ಇನ್ನೊಂದೆಡೆ ಒಂದು ಎತ್ತು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೊಂದು ಎತ್ತಿನ ಪರಿಸ್ಥಿತಿ ಚಿಂತಾಜನಕವಾಗಿದೆ.
ಶಿಕಾರಿಪುರದ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಿಂದ ಮಹಿಳಾ ಕಾರ್ಮಿಕರನ್ನು ಮಾಸ್ತಿ, ದಿಳ್ಳೂರು, ಹಳ್ಳೂರು ಗ್ರಾಮಕ್ಕೆ ಆಮ್ನಿ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಈ ಅಪಘಾತ ಉಂಟಾಗಿದೆ. ಗಾಯಾಳುಗಳನ್ನು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ಹೊನ್ನಾಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.