ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಸಂಪರ್ಕ ರಸ್ತೆಯಲ್ಲಿ ಅಪಾಯಕಾರಿಯಾಗಿದ್ದ ಹೊಂಡ-ಗುಂಡಿಗಳನ್ನು ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳ ಸಹಕಾರದಿಂದ ಮುಚ್ಚುವ ಕಾರ್ಯ ನಡೆದಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ತೋರಿದ ಸ್ಪಂದನೆಗೆ ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಬರುವ ನೇತ್ರಾವತಿ ಸೇತುವೆಯ ಉಪ್ಪಿನಂಗಡಿ ಪಾರ್ಶ್ವದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡುವ ಮಟ್ಟದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳು ಕಾಣಿಸಿದ್ದು, ದ್ವಿಚಕ್ರ ವಾಹನ ಸವಾರರನ್ನು ಬಹಳಷ್ಟು ಕಾಡುವಂತಿತ್ತು. ಇದನ್ನರಿತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ರಸ್ತೆಯ ಹೊಂಡಗಳನ್ನು ಸಿಮೆಂಟ್-ಜಲ್ಲಿ ಹಾಕಿ ಮುಚ್ಚುವ ಮೂಲಕ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸಿದ್ದಾರೆ.
ನಾಗರಿಕರ ಕೋರಿಕೆಗೆ ಸಂಪದಿಸಿದ ಅಧಿಕಾರಿ: ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ನೇತ್ರಾವತಿ ನದಿ ಸೇತುವೆಯ ಉಪ್ಪಿನಂಗಡಿ ಪಾರ್ಶ್ವದ ನೂರು ಮೀಟರ್ ರಸ್ತೆಯ ನಿರ್ವಹಣೆಯ ಹೊಣೆ ಯಾರದ್ದೆನ್ನುವುದು ಇನ್ನೂ ಖಚಿತವಾಗಿಲ್ಲ. ಹೀಗಾಗಿ ಈ ರಸ್ತೆಯ ದುಸ್ಥಿತಿಯನ್ನು ನಿವಾರಿಸಲು ಯಾರೂ ಮುಂದಾಗುತ್ತಿಲ್ಲ. ಈ ಕಾರಣಕ್ಕೆ, ದ್ವಿಚಕ್ತ ವಾಹನ ಸವಾರರು ಹೊಂಡ-ಗುಂಡಿಗಳಲ್ಲಿ ಬಿದ್ದು ಸಂಕಷ್ಟ ಪಡುವುದನ್ನು ನೋಡಲಾರದೆ ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ನಾಗೇಶ್ ಪ್ರಭು ಕೆ.ಎನ್.ಆರ್. ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.
ಪ್ರಸಕ್ತ ನಡೆಯುತ್ತಿರುವ ಹೆದ್ದಾರಿ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಉಳಿಕೆಯಾದ ಕಾಂಕ್ರೀಟ್ ಮಿಶ್ರಣವನ್ನು ಈ ರಸ್ತೆಯ ಹೊಂಡಗಳಿಗೆ ಹಾಕಲು ವಿನಂತಿಸಿದ್ದರು. ಈ ವಿನಂತಿಗೆ ಮಾನವೀಯ ಕಾಳಜಿಯೊಂದಿಗೆ ಸ್ಪಂದಿಸಿದ ಕೆಎನ್‌ಆರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ನಂದ ಕುಮಾರ್, ತಮ್ಮ ಸಂಸ್ಥೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಸ್ಪಂದನೆ ನೀಡುವಂತೆ ಸೂಚಿಸಿದ್ದರು. ಅದರಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಕಾಂಕ್ರೀಟ್ ಮಿಶ್ರಣವನ್ನು ಹಾಕುವುದರಿಂದ ಯಾವುದೇ ಪ್ರಯೋಜನ ಸಿಗದು ಎಂದರಿತು. ಸಿಮೆಂಟ್ ಮಿಶ್ರಿತ ಜಲ್ಲಿ ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಡಾಂಬರು ಹಾಕುವ ಬಗ್ಗೆ ಭರವಸೆ ನೀಡಿದ್ದಾರೆ. ತನ್ಮೂಲಕ ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡದಿದ್ದರೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ಊರಿನ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಸ್ಪಂದನೆ ನೀಡಿದ ಕೆಎನ್‌ಆರ್ ಸಂಸ್ಥೆಯ ನಡೆಯನ್ನು ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಶ್ಲಾಘಿಸಿದ್ದಾರೆ.