ಲಕ್ಷ್ಮೇಶ್ವರ: ಆದ್ರಳ್ಳಿ ಗ್ರಾಮದ ಗವಿಮಠದಲ್ಲಿನ ಶ್ರೀ ಕುಮಾರ ಮಹಾರಾಜರ ಪರ-ವಿರೋಧದ ವಿಷಯವಾಗಿ ಕಳೆದ ಕೆಲ ದಿನಗಳಿಂದ ಬಂಜಾರ ಮತ್ತು ಭೋವಿ ಸಮಾಜದ ನಡುವೆ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ.
ಎರಡು ದಿನಗಳ ಹಿಂದೆ ಭೋವಿ ಸಮಾಜದ ಕೆಲವರು ಕುಮಾರ ಮಹಾರಾಜರು ಇದ್ದ ಗವಿಮಠಕ್ಕೆ ಬೀಗ ಹಾಕಿದ್ದರು. ಇದನ್ನು ಖಂಡಿಸಿ ಶ್ರೀಗಳು ಗ್ರಾಮದ ಸೇವಾಲಾಲ್ ಮಂದಿರದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಇದು ಉಭಯ ಸಮಾಜದ ನಡುವೆ ಗೊಂದಲ ಉಂಟು ಮಾಡಿತ್ತು.
ಶುಕ್ರವಾರ ಒಂದು ಕಡೆ ಶ್ರೀಗಳ ಸತ್ಯಾಗ್ರಹ, ಶ್ರೀಗಳ ಪರವಾದ ಬಂಜಾರ ಮತ್ತು ಇತರ ಸಮಾಜದ ಪ್ರತಿಭಟನೆ, ಮತ್ತೊಂದು ಕಡೆ ಶ್ರೀಗಳು ಮಠ ಬಿಟ್ಟು ಹೋಗಬೇಕು ಎಂದು ಭೋವಿ ಸಮಾಜದವರು ಪ್ರತಿಭಟನೆ ಕೈಗೊಂಡಿದ್ದರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಕುಮಾರ ಮಹಾರಾಜ ಶ್ರೀಗಳು, ‘ಅನೇಕ ವರ್ಷಗಳಿಂದ ಇಲ್ಲಿನ ಜನರು ಅಕ್ರಮ ಕಲ್ಲು ಗಣಿಗಾರಿಕೆಯಿಂದ ನರಳುತ್ತಿರುವುದನ್ನು ಮನಗಂಡು ಇದರ ವಿರುದ್ಧ ಧನಿ ಎತ್ತಿದ್ದಕ್ಕೆ ತಾಲೂಕಿನ ಕೆಲ ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ಮತ್ತು ದಂಧೆಗೆ ಅಡ್ಡಿಯಾಗುತ್ತಾರೆ ಎಂದು ಅಕ್ರಮ ದಂಧೆಕೋರರು ಷಡ್ಯಂತ್ರದಿಂದ ನನ್ನನ್ನು ಇಲ್ಲಿಂದ ಕಳಿಸುವ ತಂತ್ರ ರೂಪಿಸಿದ್ದಾರೆ. ನನಗೆ ಮಠ ಮುಖ್ಯವಲ್ಲ, ಮಠದ ಭಕ್ತರು ಹಾಗೂ ಗ್ರಾಮಸ್ಥರು ಮಠ ಬಿಟ್ಟು ಹೋಗಲು ತಿಳಿಸಿದರೆ ದೂರ ಹೋಗಲು ಸಿದ್ಧನಿದ್ದೇನೆ. ಮಾಡಿರುವ ಆರೋಪಗಳಿಗೆ ಸಾಕ್ಷಿ ನೀಡಬೇಕು’ ಎಂದು ಪಟ್ಟು ಹಿಡಿದರು.
ಪರಿಸ್ಥಿತಿ ಸುಖಾಂತ್ಯಗೊಳಿಸಬೇಕು ಎಂದು ಎರಡೂ ಸಮಾಜದ ಹಿರಿಯರು ಸಂಜೆ ಅಡರಕಟ್ಟಿ ಬೂದವಂತ ಬಸವಣ್ಣ ದೇವಸ್ಥಾನದಲ್ಲಿ ಸಭೆ ಸೇರಿ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಶ್ರೀಗಳ ಪರ-ವಿರೋಧ ಪ್ರತಿಭಟನೆಯೂ ಬೇಡ. ಹಾಕಿದ ಬೀಗ ತೆಗೆದು ಶ್ರೀಗಳಿಗೆ ಅವಕಾಶ ಕೊಡೋಣ. ಶ್ರೀಗಳೂ ಸಹಿತ ಯಾವುದೇ ಹೇಳಿಕೆ ಕೊಡದಂತೆ ತಿಳಿಸೋಣ ಎಂದು ಒಮ್ಮತದ ತೀರ್ಮಾನ ಕೈಗೊಂಡರು. ತೀರ್ಮಾನದಂತೆ ಉಭಯ ಸಮಾಜದ ಮುಖಂಡರು ಹಾಗೂ ಮಠದ ಭಕ್ತರು ಶ್ರೀಗಳನ್ನು ಮಠದೊಳಗೆ ಕಳುಹಿಸುವ ಮೂಲಕ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆದಿದ್ದಾರೆ.
ಪರಿಸ್ಥಿತಿ ನಿಭಾಯಿಸಿ ತಿಳಿಗೊಳಿಸುವಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ ಮತ್ತು ಸಿಬ್ಬಂದಿ ಯಶಸ್ವಿಯಾದರು.