ಜಿಲ್ಲೆ

ಸಖಿ ಶೌಚಗೃಹಕ್ಕೆ ಬೀಗ! : ಬಿ.ಸಿ.ರೋಡಿನಲ್ಲಿ ಮಹಿಳೆಯರಿಗೆಂದೇ ಆರಂಭಗೊಂಡ ಜಿಲ್ಲೆಯ ಪ್ರಥಮ ಶೌಚಗೃಹ

ಸೌಮ್ಯ ಆರ್

ಸಂದೀಪ್ ಸಾಲ್ಯಾನ್ ಬಂಟ್ವಾಳ

ಮಹಿಳೆಯರಿಗೆಂದೇ ಬಿ.ಸಿ.ರೋಡಿನಲ್ಲಿ ಆರಂಭಗೊಂಡ ಜಿಲ್ಲೆಯ ಪ್ರಥಮ ಸಖಿ ಶೌಚಗೃಹ ಕೆಲವು ದಿನಗಳಿಂದ ಬಂದ್ ಆಗಿದೆ. ನಿರ್ವಹಣೆ ಹೊರೆಯಾಗುತ್ತಿರುವ ಕಾರಣ ಶೌಚಗೃಹಕ್ಕೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ.

ಅಮೃತ ನಿರ್ಮಲ ನಗರ ಯೋಜನೆಯಡಿ ಬಂಟ್ವಾಳ ಪುರಸಭೆಗೆ ಬಂದ 1 ಕೋಟಿ ರೂ. ಅನುದಾನದಲ್ಲಿ 25.5 ಲಕ್ಷ ರೂ. ವೆಚ್ಚದಲ್ಲಿ ಬಿ.ಸಿ.ರೋಡಿನಲ್ಲಿರುವ ತಾಲೂಕು ಆಡಳಿತ ಸೌಧದ ಬಳಿಯಲ್ಲಿ ಸಖಿ ಶೌಚಗೃಹ ನಿರ್ಮಿಸಲಾಗಿದೆ. ಇದರ ಕಟ್ಟಡ ಕಾಮಗಾರಿ ವೇಳೆ ವಾಮಾಚಾರ, ಸಾರ್ವಜನಿಕ ವಿರೋಧ, ಆಕ್ಷೇಪಗಳ ಮಧ್ಯೆಯೂ ಸಾಕಷ್ಟು ವಿಘ್ನಗಳು ಎದುರಾಗಿದ್ದು, ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ನಗರ ಕೇಂದ್ರದಲ್ಲಿ ಸಖಿ ಶೌಚಗೃಹ ನಿರ್ಮಿಸುವುದರಿಂದ ತಾಲೂಕು ಆಡಳಿತ ಸೌಧ ಸೇರಿದಂತೆ ಬಿ.ಸಿ.ರೋಡಿನಲ್ಲಿರುವ ವಿವಿಧ ಕಚೇರಿಗಳಿಗೆ ವಿವಿಧ ಕೆಲಸಗಳಿಗೆ ಬರುವ ಮಹಿಳೆಯರಿಗೆ ಉಪಯೋಗವಾಗಲಿದೆ. ಶೌಚಗೃಹ ಜತೆ ವಿಶ್ರಾಂತಿಗೃಹ, ಹಾಲುಣಿಸುವ ಕೊಠಡಿಯೂ ಇರುವುದರಿಂದ ಈ ಸ್ಥಳ ಹೆಚ್ಚು ಪ್ರಯೋಜನಕಾರಿ ಎನ್ನುವ ಚಿಂತನೆ ಇತ್ತು. ಶೌಚಗೃಹದ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಆದರೆ ದಿನ ಕಳೆದಂತೆ ಬಂಟ್ವಾಳ ಪುರಸಭೆಗೆ ಶೌಚಗೃಹ ನಿರ್ವಹಣೆ ವೆಚ್ಚ ಸರಿದೂಗಿಸಲು ಸಾಧಗ್ಯವಾಗದೆ ಬಂದ್‌ಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಏನು ಕಾರಣ?

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುವ ಕಾರಣಕ್ಕಾಗಿ ಶೌಚಗೃಹವನ್ನು ಇಲ್ಲಿ ನಿರ್ಮಿಸಲಾಗಿದೆ. ಆದರೆ ಇದನ್ನು ಉಪಯೋಗಿಸುವ ಮಹಿಳೆಯರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ವಹಣೆ ಸಮಸ್ಯೆ ಉಂಟಾಗಿದೆ. ಖಾಸಗಿ ನಿರ್ವಹಣಾ ಸಂಸ್ಥೆಯ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪ್ರತಿನಿತ್ಯವೂ ಶೌಚಗೃಹದ ಬಾಗಿಲು ತೆರೆಯುತ್ತಿರಲಿಲ್ಲ ಎನ್ನುವ ದೂರುಗಳಿತ್ತು. ಇದೀಗ ಕಳೆದ ಕೆಲವು ದಿನಗಳಿಂದ ಬಾಗಿಲು ತೆರೆಯುತ್ತಿಲ್ಲ. ಪ್ರತಿದಿನ ಬೆರಳೆಣಿಕೆ ಮಹಿಳೆಯರು ಮಾತ್ರ ಶೌಚಗೃಹ ಬಳಸುತ್ತಿರುವುದರಿಂದ ನಿರ್ವಹಣೆ ಹೊರೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಇದೀಗ ಇದರ ಪಕ್ಕವೇ ಪುರುಷರ ಶೌಚಗೃಹ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪುರಸಭೆ ಯೋಜನೆ ರೂಪಿಸಿದ್ದು, ನಿರ್ವಹಣೆ ಮಾಡುವ ಸಂಸ್ಥೆಗೂ ಆದಾಯ ಬರುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ.

ವಾಹನಗಳ ಪಾರ್ಕಿಂಗ್

ಸಖಿ ಶೌಚಗೃಹ ಬಂದ್ ಆದ ಬಳಿಕ ಇದರ ಮುಂಭಾಗದ ಖಾಲಿ ಸ್ಥಳ ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ತಾಲೂಕು ಆಡಳಿತ ಸೌಧ, ಉಪ ನೋಂದಣಿ ಕಚೇರಿ, ಸರ್ವೇ ಕಚೇರಿ, ನ್ಯಾಯಾಲಯ ಮತ್ತಿತರ ಕಡೆಗಳಿಗೆ ಬರುವವವರು ಶೌಚಗೃಹದ ಮುಂಭಾಗ ತಮ್ಮ ವಾಹನ ಇಟ್ಟು ಹೋಗುತ್ತಿದ್ದಾರೆ.

ಈ ಶೌಚಗೃಹವನ್ನು ಬಳಕೆ ಮಾಡುವ ಮಹಿಳೆಯ ಸಂಖ್ಯೆ ಕಡಿಮೆಯಾಗಿರುವುದರಿಂದ ಶೌಚಗೃಹದ ನಿರ್ವಹಣೆ ಕಷ್ಟವಾಗುತ್ತಿದೆ. ಇದರ ಪಕ್ಕದಲ್ಲಿ ಪುರುಷರ ಶೌಚಗೃಹ ನಿರ್ಮಾಣಗೊಂಡಲ್ಲಿ ನಿರ್ವಹಣೆ ಮಾಡುವ ಸಂಸ್ಥೆಗೂ ಅನುಕೂಲವಾಗಲಿದ್ದು, ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಬಿ.ವಾಸು ಪೂಜಾರಿ ಬಂಟ್ವಾಳ ಪುರಸಭೆ ಅಧ್ಯಕ್ಷ https://www.vijayavani.net/aathur-temple-program https://www.vijayavani.net/sdm-college-program-10