ಕಂಪ್ಲಿ: ಪಟ್ಟಣದ ಸಾರ್ವಜನಿಕ ಗಣಪತಿಗಳನ್ನು ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ನಿರ್ಮಿಸಿದ ತಾತ್ಕಾಲಿಕ ವಿಸರ್ಜನಾ ಹೊಂಡದಲ್ಲಿಯೇ ವಿಸರ್ಜನೆಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.
ಇಲ್ಲಿನ ಸೋಮಪ್ಪ ಕೆರೆಯ ಉದ್ಯಾನ ಸ್ಥಳದಲ್ಲಿ ನಿರ್ಮಿಸಿದ ವಿಸರ್ಜನಾ ಹೊಂಡ ವೀಕ್ಷಿಸಿ ಮಂಗಳವಾರ ಮಾತನಾಡಿದರು.
ಗಣೇಶ ವಿಸರ್ಜನೆ ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ಜೊತೆಗೆ ಸಾರ್ವಜನಿಕ ಗಣಪತಿ ವಿಸರ್ಜಿಸಲು ತಾತ್ಕಾಲಿಕ ಸೋಮಪ್ಪ ಕೆರೆಯಲ್ಲಿ ಹೊಂಡ ನಿರ್ಮಿಸಿ ನೀರು ತುಂಬಿಸಿದೆ.
ಬೆಳಕಿನ ವ್ಯವಸ್ಥೆ ಕಲ್ಪಿಸಿದೆ. ಸಾರ್ವಜನಿಕ ಗಣಪತಿ ಕೂಡಿಸಲು 47 ಕಡೆ ಪರವಾನಿಗೆ ನೀಡಲಾಗಿದ್ದು, ಈ ಎಲ್ಲ ಗಣಪತಿಗಳ ಮೆರವಣಿಗೆ, ವಿಸರ್ಜನಾ ಸಂದರ್ಭದಲ್ಲಿ ಕಂದಾಯ, ಪುರಸಭೆ ಅಧಿಕಾರಿಗಳು ಸ್ಥಳದಲ್ಲಿ ಹಾಜರು ಇರುವಂತೆ ನಿಯೋಜಿಸಿದೆ. ಗಣಪತಿಗಳನ್ನು ತಾತ್ಕಾಲಿಕ ಹೊಂಡದಲ್ಲಿ ವಿಸರ್ಜಿಸುವಲ್ಲಿ ಸಾರ್ವಜನಿಕರು ಜಾಗೃತಿ ತೋರಬೇಕು ಎಂದರು.
ವೈಜ್ಞಾನಿಕ ರೀತಿಯಲ್ಲಿ ಹೊಂಡ ನಿರ್ಮಿಸಬೇಕಿತ್ತು. ಹೊಂಡದ ಆಳ ಕಡಿಮೆ ಇದೆ. ಹೊಂಡದಲ್ಲಿ ನೀರು ನಿಲ್ಲುತ್ತಿಲ್ಲ. ಹೊಂಡದ ತಳಕ್ಕೆ ಏಕ ಪ್ಲಾಸ್ಟಿಕ್ ಶೀಟು ಅಳವಡಿಸದೆ ಎರಡು ಸೀಟುಗಳನ್ನು ಅಳವಡಿಸಿದೆ. ಹೊಂಡದ ಸುತ್ತ ಬ್ಯಾರಿಕೇಡ್ ಬದಲಿಗೆ ಬೇರೆ ಸುರಕ್ಷತೆ ಅಳವಡಿಸಬೇಕಿತ್ತು. ಕೆರೆಯ ಬದಲಿಗೆ ನದಿಯ ತಟದಲ್ಲಿ ತಾತ್ಕಾಲಿಕ ಹೊಂಡ ನಿರ್ಮಿಸಬೇಕಿತ್ತು ಎಂದು ಹೆಸರೇಳಲ್ಛಿಸದ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಿತಿ ಗೊಂದಲದಿಂದ ತಾಲೂಕಿನಾದ್ಯಂತ ಸೋಮವಾರ ಮತ್ತು ಮಂಗಳವಾರ ಗಣಪತಿ ಪ್ರತಿಷ್ಠಾಪನೆಗೊಂಡವು. ಸೋಮವಾರ ಮನೆಗಳಲ್ಲಿ, ಮಂಗಳವಾರ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಗಣಪತಿಗಳು ಪ್ರತಿಷ್ಠಾಪನೆಗೊಂಡವು. ಮಂಗಳವಾರವೂ ಗಣಪತಿ ಪ್ರತಿಮೆಗಳ ಮಾರಾಟ ಭರಾಟೆ ಕಂಡು ಬಂದಿತು. ಮಣ್ಣಿನ ಗಣಪತಿಗಳಿಗೆ, ಬಣ್ಣರಹಿತ ಹಸಿ ಮಣ್ಣಿನ ಗಣಪತಿಗಳಿಗೆ ಬೇಡಿಕೆ ಹೆಚ್ಚಿತ್ತು. ಗಣಪತಿ ಪ್ರತಿಮೆಗಳ ತಯಾರಿಕೆಯ ಕಚ್ಚಾದ್ರವ್ಯಗಳ ಬೆಲೆ ಹೆಚ್ಚಿದ್ದರಿಂದ ಗಣಪತಿ ಮೂರ್ತಿಗಳ ಬೆಲೆಯೂ ಗಗನಕ್ಕೇರಿತ್ತು. ಹಣ್ಣು, ಹೂ, ಬಾಳೆಗೊನೆ, ಅಲಂಕಾರಿಕ ವಸ್ತುಗಳ ಮಾರಾಟವೂ ಹೆಚ್ಚಾಗಿ ಕಂಡು ಬಂತು.