ಮಂಗಳೂರು: ರಸ್ತೆ ಅಪಘಾತದಲ್ಲಿ ಮಹಿಳೆಯ ಸಾವಿಗೆ ಕಾರಣನಾದ ಗೂಡ್ಸ್ ಟೆಂಪೋ ಚಾಲಕ ಸಿದ್ದಲಿಂಗನ ಗೌಡ ವಿ. ಪೊಲಿಸ್ ಪಾಟೀಲ್ (35) ಎಂಬಾತನಿಗೆ 9 ತಿಂಗಳು ಜೈಲು ಶಿಕ್ಷೆ ಹಾಗೂ 9 ಸಾವಿರ ರೂ. ದಂಡ ವಿಧಿಸಿ ಜೆಎಂಎ್ಸಿ 3ನೇ ನ್ಯಾಯಾಲಯ ಆದೇಶ ನೀಡಿದೆ.
2019ರ ಡಿ.1ರಂದು ಮಧ್ಯಾಹ್ನ 12.55ರ ವೇಳೆಗೆ ನಗರದ ಕದ್ರಿ ಕಂಬಳ ಎಂಬಲ್ಲಿ ವಿನೋದ್ ಕುಮಾರ್ ಅವರು ಚಲಾಯಿಸುತ್ತಿದ್ದ ಆಟೋದಲ್ಲಿ ಮಹಿಳೆ ಶೈಲಜಾ ರಾವ್ (55) ಪ್ರಯಾಣಿಸುತ್ತಿದ್ದರು. ಆಗ ಸಿದ್ದಲಿಂಗನ ಗೌಡ ಗೂಡ್ಸ್ ಟೆಂಪೋವನ್ನು ನಿರ್ಲಕ್ಷೃದಿಂದ ಚಲಾಯಿಸಿಕೊಂಡು ಬಂದು ಆಟೋಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಶೈಲಜಾ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದರು. ಚಾಲಕ ವಿನೋದ್ ಅವರ ತಲೆಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಗ ಪೊಲೀಸ್ ನಿರೀಕ್ಷರಾಗಿದ್ದ ಗೋಪಾಲಕೃಷ್ಣ ಭಟ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎ್ಸಿ 3ನೇ ನ್ಯಾಯಾಲಯ ನ್ಯಾಯಾಧೀಶರಾದ ಸುರೇಶ್ ಇ.ಎಸ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಟೆಂಪೋ ಚಾಲಕನಿಗೆ ಎ.22ರಂದು 9 ತಿಂಗಳ ಜೈಲು ಹಾಗೂ 9 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ ಅವರು ಭಾಗಶಃ ಸಾಕ್ಷಿ ವಿಚಾರಣೆ ನಡೆಸಿದ್ದು, ಬಳಿಕ ಗೀತಾ ರೈ ಅವರು ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.