ಕಿಕ್ಕೇರಿ: ಧರ್ಮದ ತಳಹದಿಯಲ್ಲಿ ಸಮುದಾಯದ ಬದುಕಿದ್ದು, ಶಾಂತಿ ನೆಮ್ಮದಿಗಾಗಿ ದೇಗುಲಗಳಿರುವುದು ಆರೋಗ್ಯಕರ ಬೆಳವಣಿಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇಗುಲ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದಾಪುರ ಸಿದ್ದರು ನೆಲೆಸಿದ್ದ ಗ್ರಾಮ ಎಂದು ಮಾಧ್ಯಮದ ಮೂಲಕ ತಿಳಿದಿರುವೆ. ಗ್ರಾಮದೇವಿ ರೇಣುಕಾದೇವಿ ಯಲ್ಲಮ್ಮ ದೇಗುಲವನ್ನು ಗ್ರಾಮಸ್ಥರು ಸದ್ಭಕ್ತರ ಸಹಕಾರದಲ್ಲಿ ನಿರ್ಮಿಸಿರುವುದು ಗ್ರಾಮಕ್ಕೆ ಶೋಭೆಯಾಗಿದೆ. ಹಿರಿಯರು ಹಾಕಿಕೊಟ್ಟಿರುವ ಧಾರ್ಮಿಕ, ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಹೋಗಲು ಯುವಕರು ಮುಂದಾಗಬೇಕು. ಯುವಕರು ಸ್ವಾವಲಂಬಿ ಬದುಕು ಸಾಗಿಸಿ. ಮೊಬೈಲ್‌ನಿಂದ ದೂರವಿರಿ, ಉತ್ತಮ ಹವ್ಯಾಸ, ಸಾತ್ವಿಕ ಮನಸ್ಸು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚುನಾವಣೆ ವೇಳೆಯಲ್ಲಿ ರಾಜಕೀಯ ಮಾಡೋಣ. ಉಳಿದಂತೆ ಅಭಿವೃದ್ಧಿಗೆ ಮುಂದಾಗೋಣ. ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸಲು ತಮ್ಮ ಸರ್ಕಾರ ಸದಾ ಸಿದ್ದವಿದೆ. ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ ಇಲ್ಲ. ಬೇಸಿಗೆಯಲ್ಲಿ ಜನ, ಜಾನುವಾರು, ಬೇಸಾಯಕ್ಕೆ ತೊಂದರೆಯಾಗದಂತೆ ಹೇಮಾವತಿ ನಾಲೆಯಲ್ಲಿ ನೀರು ಹರಿಸಲು ಕ್ರಮವಹಿಸಲಾಗುವುದು. ನೀರನ್ನು ಜೋಪಾನವಾಗಿ ಬಳಕೆ ಮಾಡಿಕೊಳ್ಳಿ. ಕಾರ್ಯಕರ್ತರು ಗ್ರಾಮದ ಸಮಸ್ಯೆ ಕುರಿತು ಚರ್ಚಿಸಿ, ಮಾಹಿತಿ ನೀಡಿ. ತಾವಿರುವುದು ಗ್ರಾಮದ ಮೂಲ ಸಮಸ್ಯೆಗಳ ಪರಿಹಾರಕ್ಕೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಬಿ.ಎಲ್.ದೇವರಾಜು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರು, ಸಿಮೆಂಟು ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಅಂಬರೀಷ್, ಮುಖಂಡರಾದ ಸೋಮಶೇಖರ್, ಕುಮಾರ್, ರಂಗೇಗೌಡ, ಪ್ರಕಾಶ್, ಕಾಳೇಗೌಡ ಮತ್ತಿತರರಿದ್ದರು.