ತಿ.ನರಸೀಪುರ: ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾದ ದೇವಾಲಯಗಳು, ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ಕರುಣಿಸುವ ಶ್ರದ್ಧಾ ಕೇಂದ್ರಗಳಾಗಿವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಹಿಂದು ಧರ್ಮ ಹಾಗೂ ಸಂಸ್ಕೃತಿಯ ಪರಂಪರೆಯೂ ಶ್ರೀಮಂತ ಕೊಡುಗೆಯಾಗಿದ್ದು, ಮಠಮಾನ್ಯಗಳು ಹಾಗೂ ದೇವಾಲಯಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮೂಲಕ ಆತನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಕ್ಷೇತ್ರಗಳಾಗಿವೆ ಎಂದರು.
ಸನಾತನ ಸಂಸಕ್ಕತಿಯ ಮಠಮಾನ್ಯಗಳು ಹಾಗೂ ದೇವಾಲಯಗಳನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಧಾರ್ಮಿಕ ಸಮಾರಂಭಗಳು ಸೂಕ್ತ ವೇದಿಕೆ. ನಮ್ಮಲ್ಲಿನ ಆತ್ಮಜ್ಞಾನ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ದೇವರು, ಧರ್ಮ, ತಂದೆ ತಾಯಿ, ಗುರು ಹಿರಿಯರು ಎನ್ನುವ ಪೂಜ್ಯಭಾವನೆಗಳಲ್ಲಿ ಉತ್ತಮ ಸಂಸ್ಕಾರವನ್ನು ಪಡೆದು, ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದೇವೆ. ಧರ್ಮದ ಆಚರಣೆಯಿಂದಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎನ್ನುವ ಇತಿಹಾಸವನ್ನು ಕಂಡಿರುವ ನಾವು, ದೇವಾಲಯಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದರು. ಕೂಡ್ಲೂರು ಗ್ರಾಮದಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಮಾರಮ್ಮ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕಸಬಾ ಪಿಎಸಿಸಿಎಸ್ ಮಾಜಿ ನಿರ್ದೇಶಕ ಪರಶಿವ ಮಾತನಾಡಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಕಸಬಾ ಪಿಎಸಿಸಿಎಸ್ ಮಾಜಿ ನಿರ್ದೇಶಕ ಬೋರ್‌ವೆಲ್ ಪರಶಿವ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಜಿ ಪಂ ಮಾಜಿ ಸದಸ್ಯ ಕೆ.ಮಹದೇವ, ಕಿರಗಸೂರು ಗ್ರಾ.ಪಂ.ಅಧ್ಯಕ್ಷ ಸಿ.ನಿಂಗರಾಜು, ಮಾಜಿ ಅಧ್ಯಕ್ಷೆ ಚಂದ್ರಮ್ಮ, ಮುಖಂಡ ಕೂಡ್ಲೂರು ದೇವರಾಜ್, ನಾಗರಾಜು, ಸೀನಪ್ಪ ಇತರರು ಇದ್ದರು.