ಜಿಲ್ಲೆ

ಮನಸ್ಸು ಉದ್ಧರಿಸಲು ದೇವಸ್ಥಾನಗಳು ಅಗತ್ಯ

ವೀರೇಶ ಸೌದ್ರಿ

ಶಿರಸಿ: ಕ್ಷುಲ್ಲಕ ಮನಸ್ಸುಗಳನ್ನು ಉದ್ಧರಿಸಲು ದೇವಸ್ಥಾನಗಳು ಅಗತ್ಯ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

ನಗರದ ಪ್ರಸಿದ್ಧ ದೊಡ್ಡ ಗಣಪತಿ ಎಂದೇ ಹೆಸರಾದ ಶ್ರೀ ಮಹಾಗಣಪತಿ ದೇವರ ವಜ್ರಾಷ್ಟಬಂಧ ಲೇಪಿತ ಜೀರ್ಣಾಷ್ಟಬಂಧದ ಮಹೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು. ಕ್ಷುಲ್ಲಕ ಭಾವವನ್ನು ಪುನೀತಗೊಳಿಸಿ ಉದ್ಧರಿಸಲು ದೇವಸ್ಥಾನಗಳು ಬೇಕು. ಮನಸ್ಸಿನ ಭಾವ ಮೇಲಕ್ಕೆತ್ತಲು ಇರುವ ಎಲ್ಲ ಉಪಾಯಗಳೂ ಉತ್ತಮವೇ. ಅದರಲ್ಲಿ ದೇವಸ್ಥಾನ ಬಹು ಸಹಕಾರಿ. ಭಾವದ ಜಾಗೃತಿ ದೇವಸ್ಥಾನದ ಮುಖ್ಯ ಉದ್ದೇಶ. ಭಕ್ತಿ ಸಿದ್ದಾಂತ ಓದಿದರೆ ಬರುವುದಿಲ್ಲ. ಭಾವ ಉದ್ದೀಪನ ವಿಚಾರದಿಂದ ಸಾಧ್ಯ ಇಲ್ಲ ಎಂದರು.

ದೇವರು ಜೀವ ಚೈತನ್ಯ ರೂಪದಲ್ಲಿ ಇರುತ್ತಾನೆ. ಆ ಬಿಂಬದ ಮುಖ್ಯ ಸ್ಥಾನ ಭಿನ್ನವಾಗಿರುತ್ತದೆ. ದೇವರ ಸಾನ್ನಿಧ್ಯ ಹಾಗೂ ಬಿಂಬ ಎರಡೂ ಉಳಿಸಿಕೊಳ್ಳಬೇಕು. ಅದಕ್ಕೆ ವಜ್ರಾಷ್ಟಬಂಧ ಒಳ್ಳೆಯ ಉಪಾಯ ಎಂದರು.

33 ವರ್ಷಗಳ ಹಿಂದೆ ನಮ್ಮ ಪೀಠಾರೋಹಣದ ಬಳಿಕ ಪ್ರಥಮ ಬಾರಿಗೆ ಶಿರಸಿ ದೊಡ್ಡ ಗಣಪತಿ ದರ್ಶನ ಮಾಡಿದ್ದೆವು. ಮೊನ್ನೆಯಷ್ಟೇ ಶಿಷ್ಯ ಸನ್ಯಾಸ ಸ್ವೀಕಾರ ಮಾಡಿದ ನಮ್ಮ ಮಠದ ಶ್ರೀ ಆನಂದಬೋಧೇಂದ್ರ ಸ್ವಾಮೀಜಿ ಅವರಿಗೂ ಸನ್ಯಾಸ ಸ್ವೀಕರಿಸಿದ ಪ್ರಥಮ ಬಾರಿಗೆ ಶ್ರೀದೇವರ ದರ್ಶನ ಸಿಕ್ಕಿದ್ದು ಸುಕೃತ ಎಂದೇ ಭಾವಿಸಿದ್ದೇವೆ ಎಂದರು.

ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಅರುಣ ನಾಯಕ, ಪ್ರವೀಣ ನಾಯಕ, ಜಗದೀಶ ಭಟ್ಟ, ಬಾಬು ಹನ್ಮಂತಿಕರ, ಸೂರ್ಯಕಾಂತ ಬಡಿಗೇರ, ಸೀತಾರಾಮ ಭಟ್ಟ ಇತರರನ್ನು ದೇವಸ್ಥಾನದ ಪರವಾಗಿ ಶ್ರೀಗಳು ಗೌರವಿಸಿದರು. ಮೊಕ್ತೇಸರ ಜಿ.ಎಸ್. ಹೆಗಡೆ ಲಿಂಗದಕೋಣ ಉಪಸ್ಥಿತರಿದ್ದರು.
ಸತೀಶ ಎಲೆಸರ ಸ್ವಾಗತಿಸಿದರು. ನರಸಿಂಹ ಭಟ್ಟ ವಂದಿಸಿದರು. ನರಸಿಂಹ ಭಟ್ಟ ವಂದಿಸಿದರು.