ಲಕ್ಷ್ಮೇಶ್ವರ: ದೇವಸ್ಥಾನಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅವು ನಮ್ಮ ಶ್ರೇಷ್ಠ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅತಿ ಮುಖ್ಯ ರಾಯಭಾರಿಯಾಗಿವೆ ಎಂದು ತಹಸೀಲ್ದಾರ್ ಕೆ. ಆನಂದಶೀಲ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಜಗದೀಶ ಶಿರಹಟ್ಟಿ ಮಾತನಾಡಿ, ಶಿಶುವಿನಹಾಳದ ಶರೀಫರು ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿದ್ದಾರೆ ಎಂದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕ ಎಸ್.ಎಫ್. ಆದಿ ಹಾಗೂ ಪುರಸಭೆ ನಿವೃತ್ತ ನೌಕರ ಬಸವಣ್ಣಪ್ಪ ನಂದೆಣ್ಣವರ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮ್ಯಾನೇಜರ್ ಸವಿತಾ ಆದಿ ಮಾತನಾಡಿದರು.
ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳಾದ ನೀಲಪ್ಪ ಕರ್ಜಕಣ್ಣವರ, ಹಿರಿಯರಾದ ನೀಲಪ್ಪ ಕನವಳ್ಳಿ ಉಪಸ್ಥಿತರಿದ್ದರು. ಟ್ರಸ್ಟ್ ಕಮಿಟಿ ಸಂಚಾಲಕ ಜಿ.ಎಸ್. ಗುಡಿಗೇರಿ, ಕಮಿಟಿಯ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ಹಾಗೂ ಉಪನ್ಯಾಸಕ ಪ್ರೊ. ಸೋಮಶೇಖರ ಕೆರಿಮನಿ, ವಿದ್ಯಾ ಹೊಟ್ಟಿ ಹಾಗೂ ಸ್ನೇಹ ಮಾಲಿಗೌಡ್ರು ಕಾರ್ಯಕ್ರಮ ನಿರ್ವಹಿಸಿದರು.