ಜಿಲ್ಲೆ

ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿ

ಧನಂಜಯ ಎಸ್.ಹಕಾರಿ.

ಹೊಳಲ್ಕೆರೆ: ಜೀವನದಲ್ಲಿ ಅಧಿಕಾರ, ಅಂತಸ್ತು, ಐಶ್ವರ್ಯ ಇದ್ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಜನರಿಗೆ ಒಳಿತನ್ನು ಬಯಸುವ ಮೂಲಕ ಉಪಕಾರ ಮಾಡುವಂತ ಸಹೃದಯಿಗಳಾಗಿರಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಭರಮಸಾಗರ ಹೋಬಳಿಯ ದೊಡ್ಡಿಗನಾಳ್ ಹೊಸಹಟ್ಟಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಂಜೂರು ಮಾಡಿರುವ 2 ಲಕ್ಷ ರೂ.ಗಳ ಡಿ.ಡಿಯನ್ನು ದೇವಸ್ಥಾನ ಸಮಿತಿ ಅವರಿಗೆ ವಿತರಿಸಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕುವ ದಾರಿ ಕಲ್ಪಿಸಿದ್ದಾರೆ. ಇಂತಹ ಕೆಲಸಗಳು ಎಂದಿಗೂ ಶಾಶ್ವತವಾಗಿರುತ್ತವೆ.

ಶ್ರೀ ಮಂಜುನಾಥನ ಸನ್ನಿಧಿಯಿಂದ ಬಂದಿರುವ ಹಣವನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ದೇವಸ್ಥಾನ ಸಮಿತಿ ಅವರಿಗೆ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎ.ಜಿ.ಪ್ರವೀಣ್ ಮಾತನಾಡಿ, ಮಹಿಳೆಯರು ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕವಾಗಿ ಸಂಸ್ಥೆ ನೆರವಾಗಲಿದೆ.

ಮೊದಲ ಹಂತದಲ್ಲೂ ಶ್ರೀಕ್ಷೇತ್ರದಿಂದ ಹಣ ನೀಡಲಾಗಿತ್ತು. ಇದೀಗ 2ನೇ ಹಂತದಲ್ಲಿ ಮತ್ತೆ ಪ್ರಸಾದದ ರೂಪದಲ್ಲಿ ಹಣ ನೀಡಲಾಗಿದೆ ಎಂದರು.

ಗ್ರಾಮದಲ್ಲಿ ಸಂಸ್ಥೆ ವತಿಯಿಂದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಕೆರೆ ಹೂಳೆತ್ತುವುದು. ಸಮುದಾಯ ಭವನಗಳ ಉನ್ನತೀಕರಣಕ್ಕೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಿರಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್, ನಾಗರಾಜ್, ಕರಿಯಪ್ಪ, ಪ್ರಸನ್ನ, ನವೀನ್ ಯಾದವ್ ಇತರರಿದ್ದರು.