ಜಿಲ್ಲೆ

ಸ್ವಾರ್ಥ ಬಿಟ್ಟರೆ ದೇವರಿಗೂ ಮೆಚ್ಚುಗೆ: ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನ

reportermys

ಮಂಡ್ಯ: ಮನಸ್ಸು ಶುದ್ಧಿ ಇರಬೇಕು. ಅದನ್ನೇ ದೇವರು ಬಯಸುವುದು. ನಾವು ಇನ್ನೊಬ್ಬರಿಗೋಸ್ಕರ ಕೆಲಸ ಮಾಡಿದಾಗ ದೇವರು ಮೆಚ್ಚುತ್ತಾನೆಯೇ ಹೊರತು ನಮಗೋಸ್ಕರ ಮಾಡಿಕೊಂಡರಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಹುಲಿಯೂರಮ್ಮ(ಹಳೇಊರಮ್ಮ)ದೇವಾಲಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹುಲಿಯೂರಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಮಹಾಕುಂಭಾಭಿಷೇಕದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೀವು ನಿಮ್ಮ ಕುಟುಂಬಕ್ಕಷ್ಟೇ ಕೈಮುಗಿದುಕೊಂಡು ಬೇಡಿಕೊಂಡರೆ ನಿಮ್ಮಪ್ಪರಾಣೆಗೂ ದೇವರು ಒಳ್ಳೆಯದು ಮಾಡುವುದಿಲ್ಲ. ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಕೇಳಿಕೊಂಡರೆ ನಿಮಗೆ ಒಳಿತಾಗುತ್ತದೆ. ಇವನಾರವ, ಇವನಾರವ, ಇವನಾರವ ನೆಂದೆನಿಸದಿರಯ್ಯ.... ಇವ ನಮ್ಮವ, ಇವ ನಮ್ಮವ, ಇವ ನಮ್ಮವ ನೆಂದೆನಿಸಯ್ಯ ಕೂಡಲಸಂಗಮದೇವ... ಎಂದು ಬಸವಣ್ಣ ಹೇಳಿದ್ದಾರೆ. ಈ ನಡೆ ಬೆಳೆಸಿಕೊಂಡರೆ ಅದೇ ದೇವರಿಗೆ ಸಲ್ಲಿಸುವ ನಿಜವಾದ ಭಕ್ತಿ ಎಂದರು.

ದೇವರು ಎಲ್ಲ ಕಡೆ ಇದ್ದಾನೆ ಎಂದು ಓದಿಕೊಂಡು ತಿಳಿದುಕೊಂಡಿದ್ದೇವೆ. ದೇವರು ಗುಡಿಯಲ್ಲಿ ಮಾತ್ರವಿಲ್ಲ, ದೇವರು ನಮ್ಮಲ್ಲಿಯೂ ಇದ್ದಾನೆ. ನಾವು ಮಾಡುವಂತಹ ಕೆಲಸವನ್ನು ಪ್ರತಿದಿನ ನೋಡುತ್ತಾನೆ. ದೇವಸ್ಥಾನ ಹಾಗೂ ಪ್ರತಿಮೆಗಳನ್ನು ಸ್ಥಾಪನೆ ಮಾಡಿದರೆ ಸಾಲದು. ನಾವೆಲ್ಲರೂ ಕೂಡ ಸತ್ಯದಿಂದ ನಡೆದುಕೊಳ್ಳಬೇಕು ಎಂದರು.

ಮನುಷ್ಯ ಮನುಷ್ಯನನ್ನ ಪ್ರೀತಿಸುವ ಗುಣ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲೇ ಬೇಡ ಎಂದು ಬಸವಣ್ಣ ಹೇಳಿದ್ದಾರೆ. ಆ ರೀತಿ ನಡೆಯೋಣ ಎಂದು ಹೇಳಿದರು.

158 ಭರವಸೆ ಈಡೇರಿಸಿದ್ದೇವೆ:

ಜನ ಆಶೀರ್ವಾದ ಮಾಡಿದ್ದರಿಂದ ಮುಖ್ಯಮಂತ್ರಿಯಾಗಿದ್ದೆ. ಆದರೆ, ಯಾರಿಂದಲೂ ಛೀ.. ಥೂ ಎಂದು ಎನ್ನಿಸಿಕೊಂಡು ಆಡಳಿತ ನಡೆಸಿಲ್ಲ. ನಾವು ನೀಡಿದ್ದ 165 ಭರವಸೆ ಪೈಕಿ 158 ಈಡೇರಿಸಿದ್ದೇವೆ. 30ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದೇವೆ. ಹಿಂದುಳಿದ ಎಲ್ಲ ಸಮುದಾಯಗಳ ಬಡವರಿಗೆ ಜಾತಿ ನೋಡದೇ ಏಳು ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದೆವು. ರೈತರ ಸಾಲ ಮನ್ನಾ ಮಾಡಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಗಣಿಗ ರವಿಕುಮಾರ್‌ಗೌಡ, ಡಾ.ಕೃಷ್ಣ, ಕೆ.ಕೆ.ರಾಧಾಕೃಷ್ಣ ಕೀಲಾರ, ದಡದಪುರ ಶಿವಣ್ಣ, ಸಿದ್ದರೂಢ ಸತೀಶ್‌ಗೌಡ, ಟ್ರಸ್ಟ್‌ನ ಗೌರವಾಧ್ಯಕ್ಷ ಜೆ.ಹುಚ್ಚಪ್ಪ, ಅಧ್ಯಕ್ಷ ಆನಂದ್, ಮರೀಗೌಡ, ಜವರಪ್ಪ, ಚಂದ್ರು, ಕಂಬದಹಳ್ಳಿ ಪುಟ್ಟಸ್ವಾಮಿ ಇತರರಿದ್ದರು.