ಕೆ.ಎಂ.ದೊಡ್ಡಿ: ಸಮೀಪದ ದೊಡ್ಡರಸಿನಕೆರೆ-ದೇವರಹಳ್ಳಿ ಗಡಿಯಲ್ಲಿರುವ ಶ್ರೀ ಸಣ್ಣಕ್ಕಿರಾಯ ಸ್ವಾಮಿ ದೇವಾಲಯಕ್ಕೆ ಹಾಕಲಾಗಿದ್ದ ಬೀಗವನ್ನು ತೆರೆಯಲಾಗಿದ್ದು, ಭಕ್ತರಿಗೆ ದೇವರ ದರ್ಶನ ಲಭಿಸಿದೆ.
ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ಹಾಗೂ ದೇವರ ಕುಲದವರ ನಡುವೆ ಮುಸುಕಿನ ಗುದ್ದಾಟ ಏರ್ಪಾಟ್ಟು ಕಳೆದೆರಡು ತಿಂಗಳಿನಿಂದ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು.
ಈ ಸಂಬಂಧ ದೇವಸ್ಥಾನದ ಟ್ರಸ್ಟಿ ಜಯಪ್ರಕಾಶ್ ಗೌಡ ಹಾಗೂ ಡಿ.ಎ.ಕೆರೆ ಗ್ರಾಮದ ಕುಲದವರು ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್‌ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಮದ್ದೂರು ತಹಸೀಲ್ದಾರ್, ಕೆ.ಎಂ.ದೊಡ್ಡಿ ಉಪತಹಸೀಲ್ದಾರ್ ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ದೇವಸ್ಥಾನ ಬೀಗ ತೆರೆಯಲಾಯಿತು. ಆ ಮೂಲಕ ಪೂಜೆ ಸಲ್ಲಿಸುವ ವಿಚಾರವಾಗಿ ಹಗ್ಗ ಜಗ್ಗಟದಲ್ಲಿದ್ದ ಅರ್ಚಕ ವಿವಾದ ಅಂತ್ಯ ಕಂಡಿದೆ.
ಕಳೆದ ಮೂರು ತಿಂಗಳನಿಂದ ಕಗ್ಗತ್ತಲ್ಲಿದ್ದ ಶ್ರೀ ಸಣ್ಣಕ್ಕಿರಾಯಸ್ವಾಮಿ ದೇವರಿಗೆ ವಿಸೇಷ ಪೂಜೆ ಸಲ್ಲಿಸಲಾಯಿತು. ದೇವರ ದರ್ಶನ ಪಡೆದ ಗ್ರಾಮಸ್ಥರು ಹಾಗೂ ಭಕ್ತರು ಪುನೀತರಾದರು.
ಉಪ ತಹಸೀಲ್ದಾರ್ ಶಿವಲಿಂಗಯ್ಯ ಮಾತನಾಡಿ, ಹೈಕೋರ್ಟ್ ಹಾಗೂ ಮದ್ದೂರು ತಹಸೀಲ್ದಾರ್ ಆದೇಶದ ಮೇರೆಗೆ ಸ್ಥಳೀಯ ಅಧಿಕಾರಿಗಳ ಜತೆಗೂಡಿ ದೇವಸ್ಥಾನದ ಬಾಗಿಲು ತೆರೆದಿದ್ದು ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ಸಲ್ಲಿಸಬಹುದು ಎಂದರು.
ಗ್ರಾ.ಪಂ. ಸದಸ್ಯ ಕುಳ್ಳ ಮಂಚೆಗೌಡ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಪ್ರಸಾದ್, ಸುಭಾಷ್, ಸಿಬ್ಬಂದಿ ಮಹೇಶ್, ಮೋಹನ್, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.