ಶಿರಹಟ್ಟ: ದೇವಸ್ಥಾನಗಳು ವಿವಿಧ ಸಮುದಾಯಗಳನ್ನು ಒಂದುಗೂಡಿಸುವ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತವೆ. ಹಬ್ಬಗಳು, ಉತ್ಸವಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜನರನ್ನು ಒಂದುಗೂಡಿಸಿ ಸಾಮಾಜಿಕ ಬಾಂಧವ್ಯ ಬಲಪಡಿಸುತ್ತವೆ ಎಂದು ಫಕೀರೇಶ್ವರಮಠದ ಫಕೀರಸಿದ್ಧರಾಮ ಶ್ರೀಗಳು ಹೇಳಿದರು.
ಪಟ್ಟಣದ ಒಂದನೇ ವಾರ್ಡ್‌ನ ಖಾನಾಪುರದಲ್ಲಿ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ, ಸಿಬಾರ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಬುಧವಾರ ಆರಂಭಿಸಲಾದ ಆಧ್ಯಾತ್ಮಿಕ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ದೇವಸ್ಥಾನಗಳು ದೇವರು ಮತ್ತು ಭಕ್ತರ ನಡುವಿನ ಸಂಪರ್ಕ ಸ್ಥಾಪಿಸುವ ಸೇತುವೆಯಂತೆ ಕಾರ್ಯನಿರ್ವಹಿಸುತ್ತವೆ. ಇಲ್ಲಿ ಭಕ್ತರು ತಮ್ಮ ದೇವರನ್ನು ಆರಾಧಿಸುತ್ತಾರೆ, ಪ್ರಾರ್ಥಿಸುತ್ತಾರೆ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ’ ದರು.
ದೇವಸ್ಥಾನಗಳು ಒಂದು ಸಂಸ್ಕೃತಿಯ ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ಈ ಸ್ಥಳಗಳು ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಮತ್ತು ಸಂಪ್ರದಾಯಗಳನ್ನು ಹರಡಲು ಸಹಾಯ ಮಾಡುತ್ತವೆ ಎಂದರು.
ಆಧ್ಯಾತ್ಮಿಕ ಪ್ರವಚನ ನೀಡಿದ ಸಂಗಮೇಶ ಶ್ರೀಗಳು ಮಾತನಾಡಿ, ಹೂವಿನ ಸೌಂದರ್ಯ ನೋಡುವಾಗ ನಮ್ಮ ಮನಸು ಶಾಂತವಾಗುತ್ತದೆ. ಮಾನವನು ತನ್ನೊಳಗೆ ಶಾಂತಿಯನ್ನು ಬೆಳೆಸಿಕೊಳ್ಳುವ ಮೂಲಕ ದೈವತ್ವದ ಸಮೀಪಕ್ಕೆ ಹೋಗಬಹುದು ಎಂದರು.
ಹೂವು ಎಲ್ಲ ಪರಿಸರದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅದೇ ರೀತಿ ಮಾನವನು ತನ್ನ ಸುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವುದು ಮುಖ್ಯ.ಹೂವು ತನ್ನ ಸುಗಂಧ ಮತ್ತು ಸೌಂದರ್ಯವನ್ನು ಇತರರಿಗೆ ನೀಡುತ್ತದೆ. ಮಾನವನು ಸಹ ಇತರರಿಗೆ ಒಳ್ಳೆಯದನ್ನು ಮಾಡುವ ಮೂಲಕ ದೈವತ್ವವನ್ನು ಸಾಧಿಸಬಹುದು.ಹೂವಿನ ಆಯಸ್ಸು ಕಡಿಮೆ. ಇದರಿಂದ ಜೀವನದ ಕ್ಷಣಿಕತೆಯನ್ನು ಅರಿತು, ಪ್ರತಿ ಕ್ಷಣವನ್ನು ಸದ್ಭಾವದಿಂದ ಬದುಕುವಂತೆ ಹೇಳುತ್ತದೆ ಎಂದು ಹೇಳಿದರು.
ಸುರೇಶ ಅಕ್ಕಿ,ಬಸವರಾಜ ಹಲಸೂರ, ಮಾಂತೇಶ ಎಸ್ ಪವಾಡಶೆಟ್ಟರ, ಮೈಲಾರಪ್ಪ ಪಡಿನವರ, ಪಂಚಪ್ಪ ಹಲಸೂರ, ದ್ಯಾಮಣ್ಣ ಬಂಗಿ, ರುದ್ದಪ್ಪ ಕರಮುಡಿ, ಮುದಕಪ್ಪ ರಡ್ಡೇರ, ಇಬ್ರಾಹಿಂ ತಹಶೀಲ್ದಾರ, ಬಸಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ರಾಜಶೇಖರಯ್ಯ ಹಿರೇಮಠ, ದ್ಯಾಮಪ್ಪ ಡಂಬಳ ಇತರರಿದ್ದರು.
ಮೂರ್ತಿ ಪ್ರತಿಷ್ಠಾಪನೆ ಫೆ. 3ರಂದು: ಜ.31 ಮೂರ್ತಿ ಮೆರವಣಿಗೆ ನಡೆಯಲಿದೆ. ಸೊರಟೂರ ಶಿವಯೋಗೀಶ್ವರ ಶ್ರೀಗಳ ಸಾನ್ನಿಧ್ಯ ವಹಿಸುವರು. ಫೆ.3ರಂದು ಮೂರ್ತಿ ಪ್ರತಿಷ್ಠಾಪನೆ. ಶ್ರೀಕ್ಷೇತ್ರ ಮೈಲಾರಲಿಂಗ ಗುರುಪೀಠದ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಶ್ರೀಗಳ ಸಾನ್ನಿಧ್ಯ ವಹಿಸುವರು. ಫೆ.4 ಕಳಸಾರೋಹಣ ಜರುಗಲಿದೆ. ಮಣಕವಾಡ-ಹಿರೇವಡ್ಡಟ್ಟಿಯ ಅಭಿನವ ಮೃತ್ಯುಂಜಯ ಶ್ರೀಗಳು ಮತ್ತು ಕಲ್ಯಾಣಪುರ ಮಠದ ಅಭಿನವ ಬಸವಣ್ಣ ಅಜ್ಜನವರ ಸಾನ್ನಿಧ್ಯ ವಹಿಸುವರು. ಗುರುನಾಥಯ್ಯ ಅಮೊಘಿಮಠ ಉದ್ಘಾಟಿಸುವರು. ಪಪಂ ಸದಸ್ಯ ಚನ್ನಬಸವ್ವ ರಾಮಪ್ಪ ಕಲಾದಗಿ ಅಧ್ಯಕ್ಷತೆ ವಹಿಸುವರು.