ಜಿಲ್ಲೆ

ಧಾರ್ಮಿಕತೆಯಿಂದ ಸುಂದರ ಬದುಕು ಸಾಧ್ಯ; ಬಸವರಾಜ ಶಿವಣ್ಣನವರ

Haveri - Kariyappa Aralikatti

ರಾಣೆಬೆನ್ನೂರ: ಎಲ್ಲಿ ಧಾರ್ಮಿಕತೆಯ ಮನೋಭಾವನೆ ಇರುತ್ತದೆಯೋ ಅಲ್ಲಿ ಪುಣ್ಯಕ್ಷೇತ್ರದ ನೆಲೆಬೀಡಾಗಿರುತ್ತದೆ. ಅಂತಹ ಪುಣ್ಯಕ್ಷೇತ್ರದಲ್ಲಿ ಇರುವ ಸರ್ವರೂ ಧಾರ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ಅಂತವರ ಬದುಕು ಸುಂದರವಾಗಬಲ್ಲದು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಶ್ರೀ ಹೊನ್ನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಬಸವೇಶ್ವರ ಸ್ವಾಮಿ, ದುರ್ಗಾದೇವಿ, ಹಳೆಹೊನ್ನತ್ತಿಯ ಶ್ರೀ ಹೊನ್ನಮ್ಮದೇವಿ ಪಾದಗಟ್ಟಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ನೂತನ ವಸತಿಗೃಹಗಳ ಉದ್ಘಾಟನೆ ಮತ್ತು ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಸಂಸ್ಕೃತಿ ಕಲಿಸುವುದರ ಜತೆಗೆ ಧಾರ್ಮಿಕತೆಯ ಮನೋಭಾವನೆ ರೂಢಿಸಬೇಕು. ಗುರು ಹಿರಿಯರನ್ನು ಗೌರವಿಸುವ ತಂದೆ ತಾಯಿಯರನ್ನು ಪೂಜಿಸುವ ಪ್ರವೃತ್ತಿ ಬೆಳೆಸಬೇಕು. ಅಂದಾಗ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು.
ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನಮ್ಮ ದೇಶ ಹಿಂದು ಸಂಸ್ಕೃತಿ ಸಂಸ್ಕಾರ ಪರಂಪರೆ ಹೊಂದಿ ಇಡೀ ವಿಶ್ವದಲ್ಲಿಯೇ ತನ್ನ ಛಾಪು ಮೂಡಿಸಿದೆ. ಶಾಂತಿಯ ನೆಲೆ ಬೀಡಾಗಿರುವ ನಮ್ಮ ದೇಶವು ಧಾರ್ಮಿಕತೆಯ ಭಕ್ತಿ ಕೇಂದ್ರವಾಗಿದೆ. ಇಂತಹ ಪವಿತ್ರವಾದ ಭರತಭೂಮಿಯಲ್ಲಿ ಜನಿಸಿದ ಸರ್ವರೂ ಧನ್ಯರು ಎಂದರು.
ನರಸೀಪುರ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚೌಡಯ್ಯದಾನಪುರದ ಒಡೆಯರ ಚಿತ್ರಶೇಖರ ಸ್ವಾಮೀಜಿ, ನೆಗಳೂರಿನ ಗುರು ಶಾಂತೇಶ್ವರ ಸ್ವಾಮೀಜಿ, ಹೂವಿನಹಡಗಲಿಯ ಸಿದ್ಧನಂದೀಶ್ವರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಮಾಚೇನಹಳ್ಳಿ, ಉಪಾಧ್ಯಕ್ಷೆ ಕಾವ್ಯ ಹಿತ್ತಲಮನಿ, ಎಸ್.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಪುಟ್ಟಯ್ಯ ಭಿಕ್ಷಾವರ್ತಿಮಠ, ಬಸವರಾಜ ಸವಣೂರ, ಮರುಳಸಿದ್ದಯ್ಯ ಮಠದ, ಹನುಮಂತಪ್ಪ ಕಬ್ಬಾರ, ಅಶೋಕ ಅರಳೇಶ್ವರ, ಕೆ. ಹೊನ್ನಪ್ಪ, ನಾಗರಾಜ ಪೂಜಾರ, ಸಂತೋಷ ಭಜಂತ್ರಿ, ಕವಿತಾ ಬಣಕಾರ ಮತ್ತಿತರರು ಉಪಸ್ಥಿತರಿದ್ದರು.