ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲನಿ ಶಾರದಾ ಬಡಾವಣೆಯಲ್ಲಿ ನಿರ್ಮಿಸಿರುವ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭವನ್ನು ಏ. 1ರಿಂದ 3ರವರೆಗೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಶಿಧರ ಉಜ್ಜಿನಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ಶ್ರೀ ವಿಘ್ನೇಶ್ವರ, ಶ್ರೀ ನಂದಿ ಸಹಿತ ಶ್ರೀ ಈಶ್ವರ, ಆದಿತ್ಯಾದಿ ನವಗ್ರಹ ಹಾಗೂ ಶ್ರೀ ವೆಂಕಟೇಶ್ವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬೆಂಗಳೂರು ಚಾಮರಾಜಪೇಟೆಯ ಶ್ರೀ ಅವಿಚ್ಛಿನ್ನ ಪರಂಪರ ಕೂಡಲಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿವನ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಏ. 1ರಂದು ಸಂಜೆ 4 ಗಂಟೆಗೆ ಉತ್ಸವ ಮೂರ್ತಿಗಳ ಮೆರವಣಿಗೆ, ಸಂಜೆ 7 ಗಂಟೆಗೆ ಉದಕ ಶಾಂತಿ ಕಾರ್ಯಕ್ರಮ ನಡೆಯಲಿದೆ. ಏ. 2ರಂದು ಬೆಳಗ್ಗೆ 8 ಗಂಟೆಗೆ ಮಹಾ ಪುಣ್ಯಾಹ ವಾಚನ, ಗಣಪತಿ ಪೂಜೆ, ವರುಣ ಪೂಜೆ, ಮೃತ್ಯುಕಾ ಪೂಜೆ, ನಾಂದಿ ಸ್ಥಾಪನೆ, ಧಾನ್ಯಾಧಿವಾಸ, ಮೂರ್ತಿಗಳ ಶುದ್ಧೀಕರಣ, ಜಲಾಧಿವಾಸ, ದೇವತಾ ಸ್ಥಾಪನೆ, ಪ್ರತಿಷ್ಠಾ ಪೂರ್ವ ಹೋಮ ನೆರವೇರಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಉಪಾಧ್ಯಕ್ಷ ಶ್ರೀಧರ ಶೇಠ ಮಾತನಾಡಿ, ಏ. 3ರಂದು ಬೆಳಗ್ಗೆ 9.15ರಿಂದ ವೇದ ಪಾರಾಯಣ, ಮೂರ್ತಿಗ ಪ್ರಾಣಪ್ರತಿಷ್ಠೆ, ಉತ್ತರಾಂಗ ಹೋಮ, ಮಹಾಪೂರ್ಣಾಹುತಿ, ಶ್ರೀ ವಿದ್ಯಾ ವಿಶ್ವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ. ಸಂಜೆ 3.30ಕ್ಕೆ ಶ್ರೀ ಅಭಿವನ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರು, ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಇತರರು ಆಗಮಿಸುವರು. ಶಶಿಧರ ಉಜ್ಜಿನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಶ್ರೀ ವೆಂಕಟೇಶ್ವರ ಸ್ವಾಮಿ ಮೂತಿರ್ಯನ್ನು ತಿರುಪತಿಯಿಂದ ತಂದಿರುವುದು ವಿಶೇಷ. ಭಕ್ತರ ಹಾಗೂ ಟ್ರಸ್ಟ್ ಪದಾಧಿಕಾರಿಗಳ ಸಹಕಾರದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದರು.
ನಾರಾಯಣ ಭಟ್ ಜೋಶಿ, ಅಶೋಕ ಕೊಳಕೂರ, ವಿಲಾಸ ದುಮ್ಮವಾಡ, ಅನ್ನದಾನಪ್ಪ ಕಾಟ್ರಿಹಳ್ಳಿ, ಇತರರು ಇದ್ದರು.