ಜಿಲ್ಲೆ

ದೇವಸ್ಥಾನಗಳು ಶಾಂತಿಯ ತಾಣ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ

reportermys

ಮಂಡ್ಯ: ದೇವಸ್ಥಾನಗಳು ಮನಸ್ಸಿಗೆ ಶಾಂತಿ ನೀಡುವ ತಾಣವಾಗಿವೆ. ಮಾತ್ರವಲ್ಲದೆ, ಆಧ್ಯಾತ್ಮಿಕ ಕೇಂದ್ರಗಳಾಗಿ ಜನರ ಮನಸ್ಸಿಗೆ ಶಾಂತಿ, ನೆಮ್ಮದಿ ತರುತ್ತವೆ. ಜತೆಗೆ ಧನಾತ್ಮಕ ಶಕ್ತಿಯು ಮನಸ್ಸನ್ನು ಉಲ್ಲಸಿತವಾಗಿಡುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಹನಕೆರೆ ಗ್ರಾಮದಲ್ಲಿ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಕಾಲಭೈರವೇಶ್ವರಸ್ವಾಮಿಯ ಮರು ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ ಹಾಗೂ ಜೀರ್ಣೋದ್ಧಾರಗೊಂಡಿರುವ ದೇವಾಲಯಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಕಾಲಭೈರವೇಶ್ವರಸ್ವಾಮಿ ಮಹಾನ್ ಶಕ್ತಿಯುತ ದೇವರು. ಅಹಂ ಅನ್ನು ಸ್ವಾಮಿ ಸಹಿಸಿಕೊಳ್ಳುವುದಿಲ್ಲ. ಹನಕೆರೆ ಗ್ರಾಮದಲ್ಲೂ ಕಾಲಭೈರವೇಶ್ವರಸ್ವಾಮಿ ಪ್ರತಿಷ್ಠಾಪನೆಗೊಂಡಿದ್ದಾನೆ. ಈಗ ದೇವಾಲಯ ಹೊಸ ಸ್ವರೂಪ ಪಡೆದಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದವು ವಿಶ್ವದೆತ್ತರಕ್ಕೆ ಬೆಳೆಯಲು ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಕಾರಣೀಭೂತರಾಗಿದ್ದಾರೆ. ಪೂಜ್ಯ ಜಗದ್ಗುರುಗಳು ಸಮುದಾಯ ಕಣ್ಣೆತ್ತಿ ನೋಡಲು, ಸ್ವಾಭಿಮಾನದಿಂದ ಬದುಕಲು ಎಲ್ಲ ಜನಾಂಗಗಳಿಗೆ ಸಲ್ಲುವ ಶಿಕ್ಷಣ ಕೊಟ್ಟಿದ್ದಾರೆ. ಆದರೆ ಪೂಜ್ಯರು ಇದು ನನ್ನ ಸಾಧನೆಯಲ್ಲ, ಕಾಲಭೈರವೇಶ್ವರಸ್ವಾಮಿ ಕೊಟ್ಟು ಸಾಧನೆ ಮಾಡಿಸಿದ್ದಾರೆ ಎನ್ನುತ್ತಿದ್ದರು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬೌದ್ಧಿಕ ಜ್ಞಾನದ ಮೂಲಕ ಆದಿಚುಂಚನಗಿರಿ ಮಠದ ಗೌರವ, ಘನತೆಯನ್ನು ಭರತ ಖಂಡದಲ್ಲಿ ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಡಾ.ನಿರ್ಮಲಾನಂದನಾಥ ಶ್ರೀಗಳು ಮಾಡುತ್ತಿದ್ದಾರೆ ಎಂದರು.

ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಕಾಂಗ್ರೆಸ್ ಮುಖಂಡ ಕೀಲಾರ ರಾಧಾಕೃಷ್ಣ, ಮುಖಂಡರಾದ ಎಚ್.ಬಿ.ರಾಜಣ್ಣ, ಹನಕೆರೆ ನಾಗಪ್ಪ, ಶಶಿಕುಮಾರ್ ಇತರರಿದ್ದರು.

ಇದೇ ವೇಳೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾಲಭೈರವೇಶ್ವರ ದೇವಾಲಯದ ವಿಮಾನ ಮತ್ತು ರಾಜಗೋಪುರಗಳ ಕಳಶಗಳನ್ನು ಸ್ಥಾಪಿಸಿದರು. ದೇಗುಲಗಳ ಉದ್ಘಾಟನೆ ಅಂಗವಾಗಿ ಧಾರ್ಮಿಕ ಕೈಂಕರ್ಯ ನಡೆದವು.