ಜಿಲ್ಲೆ

ಡಿ.27 ರಿಂದ ಕಡಿಯೆ ಗ್ರಾಮದ ಶಾಂತೇರಿ ಬೇತಾಳೇಶ್ವರ ದೇವರ ಪ್ರತಿಷ್ಠಾಪನಾ ಮಹೋತ್ಸವ

Uttara Kannada - Subash Hegde

ಕಾರವಾರ: ತಾಲೂಕಿನ ಕಡಿಯೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶಾಂತೇರಿ ಬೇತಾಳೇಶ್ವರ ದೇವಸ್ಥಾನ ಕಲಶ ಪ್ರತಿಷ್ಠಾಪನೆ ಹಾಗೂ ದೇವರ ಪ್ರತಿಷ್ಠಾಪನಾ ಕಾರ್ಯಗಳು ಡಿ.27 ರಿಂದ ಜರುಗಲಿವೆ.
ಪ್ರತ್ಯೇಕವಾಗಿ ತೆರೆದ ಸ್ಥಳದಲ್ಲಿದ್ದ ಶಾಂತೇರಿ ಹಾಗೂ ಬೇತಾಳೇಶ್ವರ ದೇವರಿಗಾಗಿ ಊರಿನ ಎಲ್ಲ ಸಮಾಜದ ಭಕ್ತರು ಹಾಗೂ ದಾನಿಗಳ ನೆರವಿನಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಿಸಲಾಗಿದೆ. ಡಿ.29 ರಂದು ಬೆಳಗ್ಗೆ 8.30 ರಿಂದ 8.55 ರ ಮಕರ ಲಗ್ನದ ಸ್ಥಿರಾಂಶದಲ್ಲಿ ಕರ್ಕಿ ದೈವಜ್ಞ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳು ನೆರವೇರಿಸುವರು. ಕಾರ್ಯಕ್ರಮಕ್ಕೆ ಶಾಸಕ ಸತೀಶ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾಗೂ ದೇವಸ್ಥಾನ ಸಮಿತಿಯ ಅಧ್ಯಕ್ಷ ದಯಾನಂದ ಗಣಪತಿ ನೇತಲಕರ್ ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮದ ವಿವರ:
ಡಿ.27 ರಂದು ಬೆಳಗ್ಗೆ ಗಣೇಶ ಪೂಜೆ ಬ್ರಹ್ಮ ಕೂರ್ಚೋಪವಾಸದ ಮೂಲಕ ಧಾರ್ಮಿಕ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ರಾತ್ರಿ ಪ್ರಧಾನ ಕಲಶ ಸ್ಥಾಪನೆ, ವಾಸ್ತು ರಾಕ್ಷೋಗ್ನ ಹೋಮ, ಬಲಿ ಕಾರ್ಯಗಳು ನಡೆಯಲಿವೆ. ಡಿ.28 ರಂದು ಗಣ ಹೋಮ, ಗೃಹ ಮೃತ್ಯುಂಜಯ ಸಹಿತ ಮಂಡಲ ದೇವತಾ ಹೋಮ, ಪರಿವಾರ ಹೋಮ ನಡೆಯಲಿದೆ. ಸಾಯಂಕಾಲ ರುದ್ರ ಹೋಮ, ಆದಿವಾಸ ಹೋಮ, ಯೋಗಿನಿ ಬಲಿ, ಶಯ್ಯಾದಿವಾಸ ಕಾರ್ಯಗಳು ನಡೆಯಲಿವೆ. ಡಿ.28 ರಂದು 8.30 ರಿಂದ ದೇವರ ಪ್ರತಿಷ್ಠಾಪನೆ, ಪೂರ್ಣಾಹುತಿ, 11.30 ಕಲಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಇತರ ಕಾರ್ಯಗಳು ನಡೆಯಲಿವೆ. ನಂತರ ಪ್ರಸಾದ ವಿತರಣೆ, ಸಾಯಂಕಾಲ ದೀಪಾಲಂಕಾರ ಜರುಗಲಿದೆ ಎಂದು ರಾಮಚಂದ್ರ ಪಾವಸ್ಕರ್, ನರೇಶ ಅಣ್ವೆಕರ್, ಶೇಖರ ರಾಯ್ಕರ್, ಮುಖೇಶ ಪಾವಸ್ಕರ್, ದೀಪಕ ರೇವಣಕರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.