ಕಳಸ: ಕಲಶೇಶ್ವರ ದೇವಸ್ಥಾನದಲ್ಲಿ ಜೂ.8 ರಿಂದ ದೇವರ ದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಹೊರನಾಡು ದೇವಸ್ಥಾನದಲ್ಲಿ ದರ್ಶನಕ್ಕೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಕಲಶೇಶ್ವರ ದೇವಸ್ಥಾನದಲ್ಲಿ ಸರ್ಕಾರದ ನಿಯಮಾವಳಿಯಂತೆ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ಭಕ್ತಾದಿಗಳು ಕ್ಯೂನಲ್ಲಿ ಬರಲು 6 ಅಡಿ ಅಂತರದಲ್ಲಿ ವೃತ್ತಗಳನ್ನು ಹಾಕಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ತೀರ್ಥ, ಪ್ರಸಾದ, ಊಟದ ವ್ಯವಸ್ಥೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಜೂ.8ರಂದು ದೇವಾಲಯದಲ್ಲಿ ಭಕ್ತರಿಗೆ ಅವಕಾಶ ನೀಡುವ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ.
ಹೊರನಾಡಿನಲ್ಲಿ ಕರೊನಾ ತಡೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚಿನ ಸಮಯಾವಕಾಶದ ಅಗತ್ಯವಿರುವುದರಿಂದ ದೇವರ ದರ್ಶನ, ಪೂಜೆ ಹಾಗೂ ವಾಸ್ತವ್ಯ ಮುಂದೂಡಲಾಗಿದೆ. ಲಾಕ್ಡೌನ್ನಲ್ಲಿದ್ದಂತೆ ನಿತ್ಯವೂ ಫೇಸ್ಬುಕ್ ಲೈವ್ ದರ್ಶನದ ವ್ಯವಸ್ಥೆ ಮಾಡಲಾಗುವುದು. ಸೇವೆ ಮಾಡಿಸುವವರು ದೇವಾಲಯದ ದೂರವಾಣಿಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.