ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ (ದ.ಕ.)
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಸಪ್ತಾಹ (ಬೃಹತ್ ಸ್ವಚ್ಛತಾ ಅಭಿಯಾನ) ಈ ಬಾರಿ ಜ.7ರಿಂದ 13ರವರೆಗೆ ನಡೆಯಲಿದೆ. ರಾಜ್ಯಾದ್ಯಂತ 10,543 ಶ್ರದ್ಧಾಕೇಂದ್ರಗಳನ್ನು ಗುರುತಿಸಲಾಗಿದ್ದು, 2,67,679 ಸ್ವಯಂಸೇವಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.
ಧಾರ್ಮಿಕ ಶ್ರದ್ಧಾಕೇಂದ್ರಗಳು ಗ್ರಾಮಗಳ ಪ್ರಮುಖ ಭಾಗ. ಇವುಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಪರಿಸರ ಸ್ವಚ್ಛತಾ ಮನೋಭಾವ ಸಾರ್ವತ್ರಿಕವಾಗುತ್ತದೆ. ದೇವಾಲಯಗಳು ವಿಶಾಲವಾಗಿದ್ದರೆ ಸ್ವಚ್ಛಗೊಳಿಸಲು ಜನರ ಸಹಭಾಗಿತ್ವ ಅಗತ್ಯ. ಈ ಎಲ್ಲ ಅಂಶಗಳನ್ನು ಗಮದಲ್ಲಿಟ್ಟುಕೊಂಡು ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಪ್ತಾಹ ಕೈಗೊಳ್ಳಲಾಗಿದೆ ಎಂದರು.
ಸ್ವಚ್ಛತಾ ಅಭಿಯಾನದಲ್ಲಿ ದೇವಾಲಯ ಆಡಳಿತ ಮಂಡಳಿ, ಒಕ್ಕೂಟ ಪದಾಧಿಕಾರಿಗಳು, ಜನಜಾಗೃತಿ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಸ್ವಚ್ಛತಾ ಸೇನಾನಿಗಳು, ಊರಿನ ಗಣ್ಯರು, ಗ್ರಾಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಒಟ್ಟು 38 ಜಿಲ್ಲೆಗಳಲ್ಲಿ (ಯೋಜನೆಯ ಪ್ರಕಾರ), 201 ತಾಲೂಕುಗಳ 10,543 ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಅಭಿಯಾನ?: ವರ್ಷದಲ್ಲಿ 2 ಬಾರಿ ಆ.15 ಮತ್ತು ಜ.14ರ ಸಂದರ್ಭ ಸಪ್ತಾಹದ ಮೂಲಕ ಸ್ವಯಂಸೇವಕರು ಶ್ರದ್ಧಾಕೇಂದ್ರಗಳಾದ ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆ ಕೈಗೊಳ್ಳುತ್ತಾರೆ. ಆರು ವರ್ಷಗಳಿಂದ ನಿರಂತರವಾಗಿ ಸ್ವಸಹಾಯ ಸಂಘಗಳ ಸದಸ್ಯರು ಶ್ರದ್ಧಾಕೇಂದ್ರದ ಸ್ವಚ್ಛತೆ ಕೈಗೊಳ್ಳುತ್ತಿದ್ದಾರೆ. ಈ ಬಾರಿ ಮಕರ ಸಂಕ್ರಾತಿಯ ಪುಣ್ಯ ಕಾಲ ಜ.14ರ ಮೊದಲು ರಾಜ್ಯದ ಎಲ್ಲ ಶ್ರದ್ಧಾಕೇಂದ್ರಗಳು ಸ್ವಚ್ಛ ಹಾಗೂ ಪಾವಿತ್ರೃತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ.
ಸ್ವಚ್ಛತಾ ಕಾರ್ಯಕ್ರಮದ ಸ್ವರೂಪ: ಗಿಡ ಗಂಟಿಗಳನ್ನು ತೆಗೆದು ದೇವಸ್ಥಾನ ಸುತ್ತಮುತ್ತ ಸ್ವಚ್ಛಗೊಳಿಸುವುದು. ಮಂದಿರ, ಮಸೀದಿಗಳ ಆವರಣ ಸ್ವಚ್ಛತೆ, ಒಳಾಂಗಣ ಸ್ವಚ್ಛತೆಗೆ ಆದ್ಯತೆ. ದೇವಸ್ಥಾನದ ಕಲ್ಯಾಣಿ, ಸಭಾಭವನ, ಅಶ್ವತ್ಥ ಕಟ್ಟೆ/ಅರಳಿಕಟ್ಟೆ ಸ್ವಚ್ಛಗೊಳಿಸುವುದು. ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ನಾನ ಕಟ್ಟೆ, ನದಿಗೆ ಪ್ಲಾಸ್ಟಿಕ್, ಬಟ್ಟೆಬರೆ ಕಸ ಎಸೆಯದಂತೆ ಜಾಗೃತಿ, ಚರ್ಚ್, ಮಸೀದಿಗಳ ಸ್ವಚ್ಛತೆ, ಸಾರ್ವಜನಿಕ ಶೌಚಗೃಹ, ನಗರ, ಬೀದಿ ಸ್ವಚ್ಛತೆಗೆ ಒತ್ತು, ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಬಟ್ಟೆ ಚೀಲ ಬಳಕೆ, ಜಾತ್ರೆ, ವಿಶೇಷ ಕಾರ‌್ಯಕ್ರಮ ದಿನ ಸ್ವಚ್ಛತೆಗೆ ತಂಡ ರಚಿಸಿ ಜಾಗೃತಿ, ತ್ಯಾಜ್ಯ ಎಸೆಯಲು ಬಿದಿರಿನ ಬುಟ್ಟಿ, ಡಸ್ಟ್ ಬಿನ್, ತಗಡಿನ ಡಬ್ಬ ಇತ್ಯಾದಿಗಳನ್ನಿಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಭಕ್ತರಿಗೆ ಸೂಚನೆ ನೀಡುವ ಫಲಕಗಳನ್ನು ಅಳವಡಿಸುವುದು.