ಜಿಲ್ಲೆ

ದೇವಾಲಯ ವಾರ್ಷಿಕೋತ್ಸವ ನಾಳೆ

ರುದ್ರಪ್ಪ ವಾಲಿ

ಗಂಗಾವತಿ: ನಗರದ ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಾಲಯದ 35ನೇ ವಾರ್ಷಿಕೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ.30ರಿಂದ ಮೇ 2ರವರೆಗೆ ಹಮ್ಮಿಕೊಳ್ಳಲಾಗಿದೆ.

ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ಜರುಗಲಿವೆ. ಏ.30ರಂದು ಸುಪ್ರಭಾತ, ತತ್ವ ಹೋಮ, ಅಲಂಕಾರ ಮಹಾಪೂಜೆ, ವಿದ್ವಾನ್ ಶ್ಯಾಮಾಚಾರ ಬಂಡಿ ಅವರಿಂದ ಉಪನ್ಯಾಸ ಜರುಗಲಿದೆ.

ಸಂಜೆ 6ಕ್ಕೆ ರಥೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ಮೇ 1ರ ಸಂಜೆ 6ಕ್ಕೆ ವಿದ್ವಾನ್ ವೇಣುಗೋಪಾಲಚಾರ್ ಅಗ್ನಿಹೋತ್ರಿ ಅವರಿಂದ ಪ್ರವಚನ, ಗಾಯಕ ಮೈಸೂರು ರಾಮಚಂದ್ರಾಚಾರರಿಂದ ದಾಸವಾಣಿ ಮತ್ತು ತೊಟ್ಟಿಲು ಸೇವೆ ನಡೆಯಲಿದೆ.

ಮೇ 2ರಂದು ವಿಜಯಧ್ವಜ ವಿದ್ಯಾಪೀಠದ 25ನೇ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು, ಹೊಸದಾಗಿ ನಿರ್ಮಿಸಿರುವ ಸಭಾಭವನ ಉದ್ಘಾಟನೆಗೊಳ್ಳಲಿದೆ. ಶ್ರೀಗಳಿಂದ ಸಂಸ್ಥಾನ ಪೂಜೆ, ಪಾರಾಯಣ, ಆಶೀರ್ವಚನ, ಗಾಯಕ ವರದೇಂದ್ರ ಗಂಗಾಖೇಡ್ ಸಂಗಡಿಗರಿಂದ ಸಂಗೀತ ಸೇವೆ ಜರುಗಲಿದೆ ಎಂದು ವಿಜಯಧ್ವಜ ವಿದ್ಯಾಪೀಠದ ವ್ಯವಸ್ಥಾಪಕ ವಾದಿರಾಜಾಚಾರ್ ಕಲ್ಮಂಗಿ ತಿಳಿಸಿದ್ದಾರೆ.