ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶನಿವಾರ ಚಂದ್ರಗ್ರಹಣದ ನಡುವೆಯೂ ಎಂದಿನಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚಂದ್ರಗ್ರಹಣದ ಹಿನ್ನಲೆ ಈ ವೇಳೆ ಕೆಲವೊಂದು ದೇಗುಲಗಳಲ್ಲಿ ಪೂಜಾ ಸಮಯ ಬದಲಾದರೆ ಇನ್ನು ಕೆಲವು ದೇಗುಲಗಳನ್ನು ಗ್ರಹಣದ ವೇಳೆ ಬಂದ್ ಮಾಡಲಾಗಿತ್ತು. ಆದರೆ ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರಿಗೆ ರಾತ್ರಿ 9 ಗಂಟೆಯವರೆಗೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಆಗಮಿಸಿದ ಭಕ್ತರು ವಿವಿಧ ಸೇವೆಗಳನ್ನು ನೆರವೇರಿಸುವುದರ ಜತೆಗೆ ಮಾದಪ್ಪನಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಗ್ರಹಣದ ಹಿನ್ನೆಲೆಯಲ್ಲಿ ತಡರಾತ್ರಿ 2.30ಕ್ಕೆ ಮಜ್ಜನ ಬಾವಿಯಿಂದ ಹೊಸ ನೀರನ್ನು ತಂದು ದೇಗುಲವನ್ನು ಸಂಪೂರ್ಣ ಶುಚಿಗೊಳಿಸಲಾಯಿತು. ಬಳಿಕ ವಿಶೇಷ ಪೂಜೆ, ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.