ಜಿಲ್ಲೆ

ಜೀರ್ಣೋದ್ಧಾರಕ್ಕೆ ೧೩.೭೫ ಕೋಟಿ ರೂ. ವಾಗ್ದಾನ - ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ

Mangaluru - Nishantha Narayana

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಮಾಸ್ಟರ್ ಪ್ಲಾನ್ ಬಗ್ಗೆ ಚರ್ಚೆಯನ್ನು ಜೀರ್ಣೋದ್ಧಾರ ಸಮಿತಿಯ ಮೊದಲ ಸಭೆಯಲ್ಲಿ ಮಾಡಲಾಗಿದೆ. ಈಗಾಗಲೇ ಉದ್ಯಮಿಗಳಿಂದ ೧೩.೭೫ ಕೋಟಿ ರೂ. ವಾಗ್ದಾನವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.

ಸಮಿತಿ, ಉಪಸಮಿತಿಗಳನ್ನು ಮಾಡಲಾಗಿದೆ. ಸರ್ಕಾರದ ೧೧ ಕೋಟಿ ರೂ. ಸೇರಿ ೬೫ ಕೋಟಿ ರೂ.ನಲ್ಲಿ ಮುಂದಿನ ಎರಡು ವರ್ಷಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ೩೨ ಎಕರೆ ದೇವಸ್ಥಾನದ ಜಾಗದಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ. ದೇವಸ್ಥಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಉದ್ಯಾನ, ಹಣ್ಣು ಹಂಪಲು ಗಿಡಗಳನ್ನು ಬೆಳೆಸುವ ಯೋಜನೆ ಹಾಕಲಾಗಿದೆ. ಸೇರಿದ ಹಿರಿಯರು ಯೋಜನೆಗೆ ಒಪ್ಪಿಗೆ ನೀಡಿದ್ದು, ಮುಂದಿನ ದಿನ ಎಲ್ಲರ ಆಕರ್ಷಣೆಯ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸತ್ಯಶಂಕರ ಭಟ್ ಮಾತನಾಡಿ, ದೇವಾಲಯ ನೀಲಿನಕ್ಷೆಯಲ್ಲಿ ಸುಂದರವಾಗಿ ಕಾಣುತ್ತಿದೆ. ಅಭಿವೃದ್ಧಿ ಕಾರ್ಯ ಎರಡು ವರ್ಷಗಳಲ್ಲಿ ನಡೆಯಲಿದೆ. ಮುಂದಿನ ಐದು ಶತಮಾನದವರೆಗೆ ಈ ವ್ಯವಸ್ಥೆ ಉಳಿಯುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿಗಳಾದ ಬಲರಾಮ ಆಚಾರ್ಯ, ಮುಳಿಯ ಕೇಶವ ಪ್ರಸಾದ್, ಜಯರಾಮ ರೈ ಮಿತ್ರಂಪಾಡಿ, ಚಂದ್ರಹಾಸ ಶೆಟ್ಟಿ, ಗೋಪಾಲಕೃಷ್ಣ ಭಟ್, ಸಂತೋಷ್ ಕುಮಾರ್ ನಳೀಲು, ಶಿವರಾಮ ಆಳ್ವ, ನರಸಿಂಹ ಕಾಮತ್, ಗಣೇಶ್ ಕಾಮತ್ ಮತ್ತಿತರರಿದ್ದರು.