ಪುತ್ತೂರು: ದೇವಸ್ಥಾನದ ಹೊರಾಂಗಣದಲ್ಲಿ ಕೆಲಸ ಕಾರ್ಯಗಳು ನಡೆಯಲ್ಲಿದ್ದು, ಎರಡು ವರ್ಷದಲ್ಲಿ ಜೀರ್ಣೋದ್ಧಾರ ಆಗಬೇಕು. ಸುಮಾರು ೨೪ ಉದ್ಯಮಿಗಳ ಜೀರ್ಣೋದ್ಧಾರ ಸಮಿತಿ ಮಾಡಿದ್ದು, ಮಾಸ್ಟರ್ ಪ್ಲಾಸ್ ಪ್ರಕಾರ ಸುಮಾರು ೬೦ ಕೋಟಿ ರೂ.ನಲ್ಲಿ ಕಾಮಗಾರಿಗಳು ನಡೆಯಲಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ದೇವಸ್ಥಾನದ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಸಭೆಯಲ್ಲಿ ಮಾತನಾಡಿದರು.
ಜೀರ್ಣೋದ್ಧಾರದ ಕೆಲಸ ಮಳೆಗಾಲ ಕಳೆಯುತ್ತಿದ್ದಂತೆ ಪ್ರಾರಂಭವಾಗಲಿದೆ. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಸಭಾಭವನವನ್ನು ತೆಗೆಯುವ ಸಾಧಕ ಬಾಧಕ ಚರ್ಚಿಸುವ ನಿಟ್ಟಿನಲ್ಲಿ ಭಕ್ತರ ಸಭೆ ನಡೆಸಲಾಗುವುದು. ಕೆರೆ ಅಭಿವೃದ್ಧಿ ವಿಚಾರ ಡಿಪಿಆರ್ ಹಂತದಲ್ಲಿದೆ. ಒಳಚರಂಡಿ ವ್ಯವಸ್ಥೆಯೂ ಇದರ ಜತೆಗೆ ಪ್ರಾರಂಭವಾಗಲಿದೆ. ಮುಖ್ಯ ರಸ್ತೆಯಿಂದ ಸ್ಮಶಾನದವರೆಗೆ ತೋಡಿನ ಬದಿಯಲ್ಲಿ ೩೦ ಅಡಿ ರಸ್ತೆ ನಿರ್ಮಾಣಕ್ಕೆ ಅನುದಾನ ಈಗಾಗಲೇ ಬಂದಿದೆ ಎಂದು ತಿಳಿಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯ ನಿಹಾಲ್ ಶೆಟ್ಟಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ. ಶೆಟ್ಟಿ, ದಿನೇಶ್ ಪಿ.ವಿ.ಕುಲಾಲ್, ಕೃಷ್ಣವೇಣಿ, ಬಿ.ಈಶ್ವರ ನಾಯ್ಕ ಬೇಡೆಕರ್, ವಿನಯಕುಮಾರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಅರ್ಚಕರಾದ ವಿ.ಎಸ್.ಭಟ್, ವಸಂತ ಕೆದಿಲಾಯ, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.