ಜಿಲ್ಲೆ

ಗಣಪತಿ ದೇವಾಲಯಕ್ಕೆ ರಜತ ಕವಚ ಸಮರ್ಪಣೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಶಾಲನಗರದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಉದ್ಯಮಿ ಫ್ರೆಸರ್‌ಪೇಟೆಯ ಗತಲಕ್ಷ್ಮಯ್ಯ ಶೆಟ್ಟಿ ಮೊಮ್ಮಕ್ಕಳಾದ ಎಫ್ .ಎಲ್. ಮಣಿ ತಮ್ಮ ಅಜ್ಜ, ಅಜ್ಜಿ ಹೆಸರಿನಲ್ಲಿ ಮತ್ತು ತಂದೆ ತಾಯಿ ಹೆಸರಿನಲ್ಲಿ ಬುಧವಾರ ಶಕ್ತಿ ಗಣಪತಿ 16 ನೇ ಅವತಾರದ ರಜತ ಕವಚ ಸಮರ್ಪಣೆ ಮಾಡಿದರು. ಇದೇ ವೇಳೆ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮತ್ತು ರಾಘವೇಂದ್ರ ಭಟ್ಟ ನೇತೃತ್ವದಲ್ಲಿ ಗಣಪತಿ ಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ನೂತನ ರಜತ ಕವಚಕ್ಕೆ ಪೂಜೆ ಪುನಸ್ಕಾರ ನೆರವೇರಿಸಿದ ಬಳಿಕ ಉದ್ಯಮಿ ಎಫ್.ಎಲ್. ಮಣಿ ಹಾಗೂ ಅವರ ಕುಟುಂಬದವರು ಶಿಲ್ಪಿ ಮಂಗಳೂರಿನ ಉಮೇಶ್ ಆಚಾರ್ಯ ಅವರಿಂದ ಸಿದ್ಧಪಡಿಸಲಾದ ಕವಚವನ್ನು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ. ದಿನೇಶ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ಬಾಬು ಮಾತನಾಡಿ, ಶ್ರೀ ಮಹಾಗಣಪತಿ 32 ಅವತಾರಗಳನ್ನು ಹೊಂದಿದ್ದು ಈ ವಿಚಾರ ಕುರಿತು ಭಕ್ತರಿಗೆ ತಿಳಿಸಿ ಅವರಿಂದ ಕವಚಗಳನ್ನು ದಾನ ರೂಪದಲ್ಲಿ ಪಡೆದು ಪ್ರತಿ ದಿನ ಈ ಕವಚಗಳನ್ನು ಧರಿಸಿ ವಿಶೇಷ ಪೂಜೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಮಣಿ ಅವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಕುಟುಂಬ ವರ್ಗದ ಪರವಾಗಿ ನೂತನ ರಜತಕವಚ ದಾನವಾಗಿ ನೀಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭ ನಂಜರಾಯಪಟ್ಟಣದ ಕಾಫಿ ಬೆಳೆಗಾರ ಕರುಂಬಯ್ಯ ಮತ್ತು ಕವಿತಾ ಅಭಿಷೇಕ ಪಾತ್ರೆ ದಾನವಾಗಿ ನೀಡಿದರು. ದೇವಾಲಯ ಸಮಿತಿ ವತಿಯಿಂದ ದಾನಿಗಳಾದ ಮಣಿ ಹಾಗೂ ಕುಟುಂಬ ಮತ್ತು ಕರುಂಬಯ್ಯ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್, ವ್ಯವಸ್ಥಾಪಕ ಶ್ರೀನಿವಾಸ್ ರಾವ್, ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜು ಮತ್ತಿತರರು ಇದ್ದರು.