ಜಿಲ್ಲೆ

ಜರ್ಮನಿ ತಂತ್ರಜ್ಞಾನದ ಕಾರಂಜಿ ನಿರ್ಮಾಣ -  ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ -  ಪುತ್ತೂರು ದೇವಳ ಕೆರೆ ಅಭಿವೃದ್ಧಿ ಸಮಾಲೋಚನೆ

Mangaluru - Nishantha Narayana

ಪುತ್ತೂರು: ದೇವಸ್ಥಾನ ಜೀರ್ಣೋದ್ಧಾರದ ಭಾಗವಾಗಿ ಪುಷ್ಕರಣಿಯ ಸಮೀಪ ಜರ್ಮನಿ ತಂತ್ರಜ್ಞಾನದಲ್ಲಿ ಕಾರಂಜಿ ಹಾಗೂ ವಿದ್ಯುತ್ ಅಲಂಕಾರಗಳನ್ನು ಮಾಡುವ ನಿಟ್ಟಿನಲ್ಲಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸುಮಾರು ೮ ಕೋಟಿ ರೂ. ವೆಚ್ಚ ಬೇಕಾಗಬಹುದೆಂದು ತಿಳಿಸಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿ ವಿಚಾರದಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

ದೇವಸ್ಥಾನಕ್ಕೆ ಆಗಮಿಸುವ ಜನರಿಗೆ ಸುತ್ತಮುತ್ತಲಿನ ಪರಿಸರ ಆಕರ್ಷಣೆ ಹಾಗೂ ಮನಸ್ಸಿಗೆ ಹಿತ ನೀಡುವಂತಾಗಬೇಕಾಗಿದೆ. ವಿಶೇಷ ರೀತಿಯ ಆಕರ್ಷಣೆಗಾಗಿ ಕಾರಂಜಿಯ ಲೇಸರ್ ಶೋ, ಪ್ರಾಜೆಕ್ಟರ್ ಶೋಗಳನ್ನು ನೋಡುವ ವ್ಯವಸ್ಥೆ ಮಾಡಲಾಗಿದೆ. ಕೆರೆಯ ಶುಚಿತ್ವಕ್ಕೆ ಸಮಸ್ಯೆ ಬಾರದ ರೀತಿಯಲ್ಲಿ ಕಾರಂಜಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಲವೇ ದಿನದಲ್ಲಿ ಮಾಸ್ಟರ್‌ಪ್ಲ್ಯಾನ್ ಅಂತಿಮವಾಗಲಿದೆ ಎಂದರು.

ದೆಹಲಿ ಮೂಲದ ಅಕ್ವಾರೀಸ್ ಟೆಕ್ನಾಲಜಿನ ಆರ್.ಕೆ.ಚೌಹಾನ್ ವಿವಿಧ ರೀತಿಯ ಕಾರಂಜಿಗಳ ಮಾಹಿತಿ ನೀಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್ ಬಿ., ಸುಭಾಷ್ ರೈ, ಮಹಾಬಲ ರೈ ವಳತ್ತಡ್ಕ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಇದ್ದರು.

ದೇವಸ್ಥಾನಕ್ಕೆ ಆಗಮಿಸುವ ಭಕ್ತರು ವಸ್ತ್ರಸಂಹಿತೆ ಪಾಲಿಸುವ ನಿಟ್ಟಿನಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ವಸ್ತ್ರಸಂಹಿತೆಯ ಮಾಹಿತಿ ನೀಡುವ ಕಾರ್ಯ ಮಾಡಲಾಗಿದೆ.

| ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ