ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ಕಾಗಿ ಮರ ತೆರವಿನ ಸಂದರ್ಭ ಆಕಸ್ಮಿಕವಾಗಿ ಮರ ಮನೆಗಳ ಮೇಲೆ ಬಿದ್ದ ಪರಿಣಾಮ ಛಾವಣಿಗೆ ತೀವ್ರ ಹಾನಿಯಾಗಿದೆ. ಕೊಂಬೆಗಳನ್ನು ತೆರವು ಮಾಡುವಾಗ ಗೋಡೆಗಳೂ ಸಂಪೂರ್ಣ ಧರೆಗುರುಳಿದ್ದು, ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಮರ ಬಿದ್ದು ಹಾನಿಯಾದ ಮನೆಯಲ್ಲಿ ಯಾರೂ ವಾಸವಾಗಿಲ್ಲ. ಐದು ಮಂದಿಗೆ ವಿಭಾಗ ಮಾಡಿ ಸುಮಾರು ೨೧ ಸಾವಿರಕ್ಕೆ ಬಾಡಿಗೆಯನ್ನು ಪಡೆಯುತ್ತಿದ್ದರು. ಬಾಡಿಗೆದಾರರು ಮನೆ ಬಿಟ್ಟುಕೊಡುವುದಾಗಿ ಹೇಳಿ ಭಾನುವಾರವೇ ಮನೆ ತೆರವು ಮಾಡಿಕೊಂಡಿದ್ದರು. ಮನೆ ತೆರವಿಗೆ ಸಮ್ಮತಿಸಿದ ಹಾಗೂ ಬಾಡಿಗೆಗಿದ್ದ ಒಟ್ಟು ೧೧ ಕುಟುಂಬಗಳಿಗೆ ನಿವೇಶನ, ಆರ್ಥಿಕವಾಗಿ ಸಂಕಷ್ಟ ಇರುವವರಿಗೆ ಮನೆಯನ್ನೂ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
೨ ಕೋಟಿ ಅನುದಾನದ ಕಾಮಗಾರಿಯನ್ನು ಮಾಡದೇ ಹೋದರೆ, ಅದು ಲ್ಯಾಪ್ಸ್ ಆಗುತ್ತದೆ ಎಂಬಕಾರಣಕ್ಕೆ ಕಾಮಗಾರಿಯನ್ನು ಮುಂದುವರಿಸಿದ್ಡೇವೆ. ನಗರಸಭೆಗೆ ಈಗಾಗಲೇ ಪತ್ರ ನೀಡಲಾಗಿದ್ದು, ಯಾರೊಬ್ಬರಿಗೂ ಖಾತಾ ಇಲ್ಲ, ಕದ ಸಂಖ್ಯೆಯನ್ನು ರದ್ದುಪಡಿಸುವುದಾಗಿ ನಗರ ಸಭೆಯವರು ಹೇಳಿದ್ದಾರೆ. ದೇವಸ್ಥಾನದ ಜಾಗದಲ್ಲಿದ್ದ ಯಾವುದೇ ಕುಟುಂಬಗಳಿಗೂ ಬೆದರಿಕೆ ಹಾಕಿಲ್ಲ. ಎಲ್ಲರ ಜತೆಗೆ ಮಾತುಕತೆ ನಡೆಸಿಯೇ ಮನೆ ತೆರವು ಕಾರ್ಯ ನಡೆದಿದೆ ಎಂದರು.
ದೇವಳ ಸಮಿತಿ ಸದಸ್ಯರಾದ ವಿನಯಕುಮಾರ್, ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ. ವಿ., ಪ್ರಸನ್ನ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.
ಸ್ವಇಚ್ಛೆಯಿಂದ ಮನೆ ತೆರವು ಮಾಡಿದ ಕುಟುಂಬಗಳಿಗೆ ಸುಮಾರು ೧೭ ಲಕ್ಷ ರೂ. ನೀಡಿದ್ದು, ಇದನ್ನು ನಾನು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಭರಿಸಿದ್ದೇವೆ. ಮನೆ ತೆರವಿನ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮರ ತೆರವಿಗೆ ಅರಣ್ಯ ಇಲಾಖೆಯಿಂದ ಅನುಮತಿ ಮತ್ತು ಮನೆಯ ಮಾಲೀಕರ ಒಪ್ಪಿಗೆ ಪಡೆಯಲಾಗಿದೆ. ಸಾಧ್ಯವಾದಷ್ಟು ಎಚ್ಚರ ವಹಿಸಿದ್ದರೂ, ಹಗ್ಗ ತುಂಡಾಗಿ ಮರ ಮನೆಯ ಮೇಲೆ ಉರುಳಿದೆ.
|ಅಶೋಕ್ ರೈ, ಶಾಸಕ, ಪುತ್ತೂರು
ಬಿಜೆಪಿ ಮುಖಂಡನ ಮನೆ ಬಾಕಿ?
ಮೂರು ಮನೆಗಳು ತೆರವಿಗೆ ಬಾಕಿಯಿದ್ದು, ಇದರಲ್ಲಿ ಓರ್ವ ವ್ಯಕ್ತಿ ನ್ಯಾಯಾಲಯದ ಮೆಟ್ಟಲೇರಿದ್ದರು. ಆದರೆ ನ್ಯಾಯಾಲಯ ದೇವಸ್ಥಾನದ ಅಭಿಪ್ರಾಯ ಮುಖ್ಯ ಎಂದು ಹೇಳಿದ ಕಾರಣ ಅವರು ಒಂದು ವಾರದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ದೇವಸ್ಥಾನಕ್ಕೆ ಜಾಗ ಬಿಟ್ಟು ಕೊಡುವುದಾಗಿ ಶಾಸಕರಲ್ಲಿ ಹೇಳಿದ್ದಾರೆ. ಇನ್ನೊಂದು ಮನೆಯವರು ಬಿಟ್ಟುಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿ ಮುಖಂಡ ನಗರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮಾತ್ರ ಮನೆ ಬಿಟ್ಟುಕೊಡಲು ಬಾಕಿಯಿದೆ. ಅಭಿವೃದ್ಧಿ ಕಾರ್ಯಕ್ಕೆ ತೊಡಕಾಗಬಾರದೆಂಬ ನಿಟ್ಟಿನಲ್ಲಿ ಈಗಾಗಲೇ ತಾಲೂಕು, ಜಿಲ್ಲಾ ನ್ಯಾಯಾಲಯ ಸೇರಿ ಹೈಕೋರ್ಟ್‌ನಲ್ಲಿ ಕೆವಿಯೆಟ್ ಸಲ್ಲಿಸಲಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡೇ ಮುನ್ನಡೆಯಲಾಗುತ್ತಿದೆ.
ಶಾಸಕ ಅಶೋಕ್ ರೈ ವಿರುದ್ಧ ದೂರು
ಶ್ರೀಮಹಾಲೀಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ೬ ಪ್ರತ್ಯೇಕ ಕದ ಸಂಖ್ಯೆಯಿರುವ ಕಟ್ಟಡಗಳನ್ನು ಸೋಮವಾರ ಬೆಳಿಗ್ಗೆ ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಒಬ್ಬರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಗೆ ದೂರು ನೀಡಿದ್ದಾರೆ. ಉಜಿರೆ ನಿವಾಸಿ ದಿ. ಜಯಶ್ರೀ ಹೊಳ್ಳರವರ ಪುತ್ರ ವಕೀಲ ವಿಜಯ ರಾಘವೇಂದ್ರ ದೂರು ನೀಡಿದ್ದಾರೆ. ದ. ಕ. ಜಿಲ್ಲಾಽಕಾರಿ, ಪೊಲೀಸ್ ಉಪ ವಿಭಾಗಾಽಕಾರಿ, ಪೊಲೀಸ್ ನಿರೀಕ್ಷಕ, ನಗರ ಪೊಲೀಸ್ ಉಪನಿರೀಕ್ಷಕ, ನಗರ ಸಭೆ ಪೌರಾಯುಕ್ತ, ರಾಜ್ಯ ಮಾನವ ಹಕ್ಕುಗಳ ಆಯೋಗ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ದೂರಿನ ಪ್ರತಿಯನ್ನು ರವಾನಿಸಲಾಗಿದೆ.