climate change, low angle view Thermometer on blue sky with sun shining in summer show increase temperature, concept global warming 
ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಏರಲಿದೆ ಉಷ್ಣಾಂಶ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯ ಜನರಿಗೆ ಇಲ್ಲೊಂದಿದೆ ಶಾಕಿಂಗ್ ನ್ಯೂಸ್! ಒಂದು ವರ್ಷದಿಂದ ವಾಡಿಕೆ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಶತಮಾನದಲ್ಲಿ ದಾಖಲಾಗದಷ್ಟು ಉಷ್ಣಾಂಶ ಈ ಬಾರಿ ದಾಖಲಾಗುವ ಸೂಚನೆ ಗೋಚರಿಸಿದೆ.

ಜಿಲ್ಲೆಯಲ್ಲಿ ಈ ವರ್ಷ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸೂಚನೆ ಇರುವುದಾಗಿ ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೇಸಿಗೆ ಆರಂಭದ ದಿನಗಳಲ್ಲೇ ಉಷ್ಣಾಂಶದಲ್ಲಿ ಸಾಕಷ್ಟು ಏರಿಕೆಯಾಗಿತ್ತು. ಜಿಲ್ಲೆಯಲ್ಲಿ 2015-2016ನೇ ಸಾಲಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದು ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಗರಿಷ್ಠ ಉಷ್ಣಾಂಶ ಎನ್ನಲಾಗಿತ್ತು. ಆದರೆ, ಈ ವರ್ಷ ಈಗಾಗಲೇ ಆ ದಾಖಲೆಯೂ ಅಳಿಸಿದೆ. ಮಾ.26ರಂದು ಜಿಲ್ಲೆಯಲ್ಲಿ 38.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಅತಿ ಹೆಚ್ಚು ಉಷ್ಣಾಂಶ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಇದೇ ವೇಳೆ ಗರಿಷ್ಠ ಉಷ್ಣಾಂಶ 34 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 21 ಡಿ.ಸೆ. ದಾಖಲಾಗಿತ್ತು. ಆದರಿಂದು ಗರಿಷ್ಠ ಉಷ್ಣಾಂಶ 37.5 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 23 ಡಿ.ಸೆ. ಇದೆ. ಸರಾಸರಿ ಉಷ್ಣಾಂಶವೂ ಶೇ.5 ರಷ್ಟು ಹೆಚ್ಚಾಗಿದೆ. 2022ರಲ್ಲಿ ಗರಿಷ್ಠ 35 ಡಿ.ಸೆ. ಹಾಗೂ ಕನಿಷ್ಠ 21 ಡಿ.ಸೆ., 2021 ರಲ್ಲಿ ಗರಿಷ್ಠ ಉಷ್ಣಾಂಶ 32 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ., 2019 ರಲ್ಲಿ ಗರಿಷ್ಠ ಉಷ್ಣಾಂಶ 33 ಡಿ.ಸೆ. ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ. ದಾಖಲಾಗಿತ್ತು.

‘ಮೈಸೂರು ಜಿಲ್ಲೆ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಅತಿ ಹೆಚ್ಚಿನ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ. ಏಪ್ರಿಲ್ ಮೂರನೇ ವಾರ ಮತ್ತು ಮೇ ಪ್ರಾರಂಭದಲ್ಲಿ ಉಷ್ಣಾಂಶ ಇನ್ನೂ ಹೆಚ್ಚಾಗುತ್ತದೆ. ಈ ಬಾರಿ ಮಾರ್ಚ್ ಆರಂಭದಲ್ಲಿಯೇ 37 ಡಿಗ್ರಿ ಸೆಲ್ಸಿಯಸ್ ದಾಖಲೆಯಾಗಿದೆ. ಎರಡು ವಾರದಲ್ಲಿ 40 ಅಥವಾ 41 ಡಿಗ್ರಿ ಸೆಲ್ಸಿಯಸ್ ದಾಖಲಾದರೂ ಅಚ್ಚರಿಯಿಲ್ಲ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಮಳೆಯೊಂದೇ ಪರಿಹಾರ: ವರ್ಷದಿಂದ ಸರಿಯಾದ ಪ್ರಮಾಣದಲ್ಲಿ ಮಳೆ ಬೀಳದಿರುವುದು ಉಷ್ಣಾಂಶ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಮಯಕ್ಕ ತಕ್ಕಂತೆ ಹಿಂಗಾರು ಮಳೆಯಾಗಿದ್ದರೆ ಇಷ್ಟು ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚುತ್ತಿರಲಿಲ್ಲ. ಯುಗಾದಿ ಆಸುಪಾಸಿನಲ್ಲಿ ಮಳೆಯಾದರೆ ಉಷ್ಣಾಂಶ ಕಡಿಮೆಯಾಗಲಿದೆ.

  • ಜನರಿಗೆ ಒಂದಿಷ್ಟು ಟಿಪ್ಸ್…
  • *ಸಡಿಲ ಹಾಗೂ ಹಗುರವಾಗಿರುವ ಹತ್ತಿ ಬಟ್ಟೆ ಧರಿಸುವುದು
  • *ಆದಷ್ಟು ಹೆಚ್ಚು ಬಾರಿ ತಣ್ಣೀರು ಸ್ನಾನ ಮಾಡುವುದು
  • *ಉಷ್ಣಾಂಶ ಹೆಚ್ಚಿರುವ ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಶ್ರಮದ ಕೆಲಸ, ವ್ಯಾಯಾಮ ಬೇಡ
  • *ಶರಬತ್ತು, ಹಣ್ಣಿನ ರಸ, ಮಜ್ಜಿಗೆ, ಲಸ್ಸಿ, ನಿಂಬೆಹಣ್ಣಿನ ರಸದಿಂದ ತಯಾರಿಸಿದ ಪಾನೀಯ ಸೇವನೆ
  1. ಸೌತೆಕಾಯಿ ಹೆಚ್ಚು ತಿನ್ನುವುದು ಉತ್ತಮ
    *ಟೀ, ಕಾಫಿ ಸೇವನೆ ಕಡಿಮೆ ಮಾಡಿದರೆ ಒಳಿತು
    *ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಗೆ ಕ್ಯಾಪ್ ಧರಿಸಿದರೆ ಉತ್ತಮ
    *ಬಿಸಿಲಿನಿಂದ ರಕ್ಷಣೆಗೆ ಮಹಿಳೆಯರು ಸ್ಕಾರ್ಪ್ ಧರಿಸುವುದು

ರೈತರು ಏನು ಮಾಡಬೇಕು?
*ರೈತರು ಬೆಳಗ್ಗೆ, ಸಂಜೆ ವೇಳೆ ಮಾತ್ರ ಜಮೀನು ಕೆಲಸ ಮಾಡಬೇಕು
*ಬೆಳಗ್ಗೆ 11ರಿಂದ ಮಧ್ಯಾಹ್ನ 3.30ರವರೆಗೆ ವಿಶ್ರಾಂತಿ ಪಡೆದರೆ ಉತ್ತಮ
*ಬಿಸಿಲಿನ ತಾಪದಿಂದಾಗುವ ಹಾನಿ ತಪ್ಪಿಸಲು ರಾಸುಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ಮಧ್ಯಾಹ್ನದ ವೇಳೆ ಕೆರೆ, ಹೊಂಡ ಅಥವಾ ಹಳ್ಳಗಳಲ್ಲಿ ಈಜಲು ಬಿಡಬೇಕು ಅಥವಾ ದಿನಕ್ಕೆ 2-3 ಬಾರಿ ಮೈಮೇಲೆ ನೀರು ಹಾಕಬೇಕು.
*ಕೊಟ್ಟಿಗೆಯ ವಾತಾವರಣ ತಂಪಾಗಿರುವಂತೆ ನೋಡಿಕೊಳ್ಳಬೇಕು.

ಈಗಾಗಲೇ ಮಾರ್ಚ್ 26 ರಂದು ಜಿಲ್ಲೆಯಲ್ಲಿ 38.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಸದ್ಯ ಗರಿಷ್ಠ ಉಷ್ಣಾಂಶ 37.5 ಡಿ.ಸೆ. ದಾಖಲಾಗಿದ್ದು, ಎರಡು ವಾರದಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸೂಚನೆ ಇದೆ. ಈ ಹಿಂದೆ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅದೇ ಜಿಲ್ಲೆಯಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ.ಡಾ.ಸುಮಂತ್‌ಕುಮಾರ್ ಸಹ ಸಂಶೋಧಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ