ಕಳಸ: ಆಟಿ ತಿಂಗಳಿಗೆ ಸಂಬಂಧಿಸಿದ ಆಚರಣೆಗಳು ಕೇವಲ ನಂಬಿಕೆಗೆ ಮಾತ್ರವಲ್ಲ ಅವುಗಳಲ್ಲಿ ಪ್ರಾಕೃತಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಅಡಕವಾಗಿದೆ ಎಂದು ಕಳಸ ಬ್ರಹ್ಮ ಶ್ರೀನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಹೇಳಿದರು.
ಬ್ರಹ್ಮ ಶ್ರೀನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಳುವರ ಸಂಸ್ಕೃತಿ, ಭಾಷೆ, ಆಹಾರ, ಆಚಾರ-ವಿಚಾರ ಬಹಳ ವಿಶಿಷ್ಟತೆಯಿಂದ ಕೂಡಿದ್ದು, ಈ ವೈವಿಧ್ಯವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಗೌರವಾಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಜೀವನ ನಡೆಸಲು ಬಹಳ ಕಷ್ಟವಾದ ದಿನಗಳಾಗಿದ್ದವು. ಆ ಸಂದರ್ಭದಲ್ಲಿ ನೈಸರ್ಗಿಕವಾಗಿ ಬೆಳೆಯುವ ವಸ್ತುಗಳನ್ನೇ ಸೇವಿಸಿ ಜೀವನ ನಡೆಸುತ್ತಿದ್ದರು. ಇಂದು ತುಳುನಾಡಿನಲ್ಲಿ ಜನಜನಿತ ಆಚರಣೆ ಉಳಿಸಿ,ಬೆಳೆಸುವ ಪ್ರಯತ್ನ ಇದಾಗಿದೆ. ಮುಂದಿನ ಪೀಳಿಗೆ ತುಳುನಾಡ ಸಂಸ್ಕೃತಿ ತಿಳಿಯಬೇಕು ಎಂದು ಹೇಳಿದರು.
ಗಮನ ಸೆಳೆದ ವಿವಿಧ ಖಾದ್ಯಗಳು: ಆಟಿಡೊಂಜಿ ಕೂಟದಲ್ಲಿ ಮಹಿಳೆಯರು ಮನೆಯಿಂದಲೇ ತಯಾರಿಸಿ ತಂದ ವಿವಿಧ ಬಗೆಯ ಖಾದ್ಯಗಳು ಗಮನ ಸೆಳೆದವು. ಅರಶಿನ ಕಡುಬು, ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕೋಳಿರೊಟ್ಟಿ, ಒಂದೆಲಗ ಚಟ್ನಿ, ಸಿಗಡಿ ಚಟ್ನಿ, ಕೆಸುವಿನ ಪಲ್ಯ, ಕೆಸುವಿನ ಚಟ್ನಿ, ಕಳಲೆ ಪಲ್ಯ, ಶ್ಯಾವಿಗೆ ಕಡುಬು, ಹುರುಳಿ ಚಟ್ನಿ, ತಜಂಕ್ ಪಲ್ಯ, ಹುರುಳಿ ಸಾರು, ಮೊಳಕೆ ಕಾಳು ಪಲ್ಯ ಗಳು ಗಮನ ಸೆಳೆದವು.
ಬಿಲ್ಲವ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿಲ್ಲವ ಮುಖಂಡರಾದ ಶ್ರೀ ನಿವಾಸ ಪೂಜಾರಿ, ಶೇಖರ ಪೂಜಾರಿ, ರವಿ ಸುವರ್ಣ, ಪೂರ್ಣಿಮಾ ಕಿಶೋರ್, ಹೇಮಾ ರವಿ ಸುವರ್ಣ, ಜಯಂತಿ ವಾಸುದೇವ್, ಗೌತಮಿ ಇತರರು ಇದ್ದರು.