ಗುಂಡ್ಲುಪೇಟೆ: ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ತಾಲೂಕಿನ ನೇನೆಕಟ್ಟೆ ಗ್ರಾಮದಲ್ಲಿ ಬಿಜೆಪಿ ಮಡಲದ ವತಿಯಿಂದ ಹಮ್ಮಿಕೊಂಡಿರುವ ಗ್ರಾಮ ಚಲೋ ಅಭಿಯಾನದ ಅಂಗವಾಗಿ 1 ಮತ್ತು 2ನೇ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಮೂರು ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ತಾಲೂಕಿನ ಬೂತ್‌ಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಗ್ರಾಮ ಚಲೋ ಅಭಿಯಾನದಲ್ಲಿ ನಿರಂತರವಾಗಿ ಪಾಲ್ಗೊಂಡು ತಾಲೂಕಿನಲ್ಲಿ ಎಲ್ಲ ವರ್ಗದ ಜನರನ್ನು ಭೇಟಿಯಾಗಿ ದೇಶಕ್ಕೆ ಬಿಜೆಪಿ ಏಕೆ ಅನಿವಾರ್ಯವಾಗಿದೆ. ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಎಲ್ಲ ಗ್ರಾಮಗಳ ಮನೆ ಮನೆಗೆ ತೆರಳಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿಕೊಡಲಿದ್ದಾರೆ. 2024ರಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಬ ಧ್ಯೇಯದೊಂದಿಗೆ, ಗೋಡೆ ಬರಹ ಬರೆಯಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳ ಕರಪತ್ರವನ್ನು ಮನೆಗಳಿಗೆ ತಲುಪಿಸಿ, ನಮೋ ಆ್ಯಪ್ ಮುಖಾಂತರ ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುವಂತೆ ಬೂತ್ ಅಧ್ಯಕ್ಷರಿಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಜನ ಧನ ಯೋಜನೆ ಕ್ರಾಂತಿಕಾರಿಯಾಗಿದ್ದು, ಪ್ರತಿಯೊಬ್ಬರು ಬ್ಯಾಂಕ್ ಖಾತೆಯನ್ನು ತೆರೆದಿದ್ದರಿಂದ ಸರ್ಕಾರದ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವ ಮೂಲಕ ಮಧ್ಯವರ್ತಿಗಳ ಶೋಷಣೆ ತಪ್ಪಿಸಿದ್ದಾರೆ. ಕೇಂದ್ರ ಸರ್ಕಾರ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಆಯುಷ್ಮಾನ್ ಯೋಜನೆಗಳಿಂದ ಬಡವರಿಗೆ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಇಂತಹ ಕಾರ್ಯಕ್ರಮಗಳನ್ನು ಬೂತ್ ಮತ್ತು ಪೇಜ್ ಪ್ರಮುಖರು ಮತದಾರರಿಗೆ ತಿಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್, ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ನಿರ್ಗಮಿತ ಅಧ್ಯಕ್ಷ ಡಿ.ಪಿ.ಜಗದೀಶ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ನವೀನ್ ಮೌರ್ಯ, ಎಸ್.ಸಿ.ಮಂಜುನಾಥ್, ಮಲ್ಲೇಶ್, ಮೂರ್ತಿ ಸೇರಿದಂತೆ ಹಲವರು ಇದ್ದರು.