ಜಿಲ್ಲೆ

ರೋಗಿಗಳಿಗೆ ಟೆಲಿ ಮೆಡಿಸಿನ್ ಸಂಜೀವಿನಿ: ಐಎಂಎ ಶಾಖೆ ವ್ಯಾಪ್ತಿಯಲ್ಲಿ ತಂತ್ರಜ್ಞಾನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಶಿವಮೊಗ್ಗ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ರಾಜ್ಯದಲ್ಲಿ ಆರಂಭವಾಗಿರುವ ‘ಟೆಲಿ ಮೆಡಿಸಿನ್’ ಸೇವೆ ಸದ್ಬಳಕೆಯಾಗುತ್ತಿದೆ. ಪ್ರತಿನಿತ್ಯ ಪರಿಣತ ವೈದ್ಯರಿಂದ ನೂರಾರು ಜನರು ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಪ್ರಸ್ತುತ ಎಲ್ಲ ಜಿಲ್ಲೆಗಳಲ್ಲೂ ಬಹುತೇಕ ಆಸ್ಪತ್ರೆಗಳು ತುರ್ತು ಆರೋಗ್ಯ ಸೇವೆಗೆ ಮೀಸಲಾಗಿವೆ. ಇನ್ನು ಕೆಲವು ನರ್ಸಿಂಗ್ ಹೋಮ್ಳನ್ನು ಲಾಕ್​ಡೌನ್ ಮುಕ್ತಾಯದವರೆಗೂ ಮುಚ್ಚಲಾಗಿದೆ. ಹೀಗಾಗಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುವುದು ಕಷ್ಟ ಎಂಬ ಸನ್ನಿವೇಶವಿದೆ. ಮುಖ್ಯವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ‘ಟೆಲಿ ಮೆಡಿಸಿನ್’ ಎಂಬುದು ‘ಸಂಜೀವಿನಿ’ಯಂತೆ ಕಾಣುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಹಲವು ತಜ್ಞ ವೈದ್ಯರು ಟೆಲಿ ಮೆಡಿಸಿನ್ ಮೂಲಕ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಸಲಹೆ ನೀಡುತ್ತಿದ್ದಾರೆ. ಅಗತ್ಯ ಔಷಧಗಳನ್ನು ಸೂಚಿಸುತ್ತಿದ್ದಾರೆ. ಇದರಿಂದ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

ಟೆಲಿ ಮೆಡಿಸಿನ್ ವಿಧಾನ ಹೇಗೆ?: ಯಾವುದೇ ವೈದ್ಯರನ್ನು ಸಂರ್ಪಸುವ ಹೊಸ ರೋಗಿಗಳು ಹೆಸರು, ಊರು, ಕಾಯಿಲೆ, ಗುಣಲಕ್ಷಣಗಳನ್ನು ವ್ಯಾಟ್ಸ್​ಆಪ್ ಮೂಲಕ ತಿಳಿಸಬೇಕು. ಹಳೆಯ ರೋಗಿಯಾದರೆ ಮೇಲ್ಕಂಡ ವಿವರಗಳ ಜತೆಗೆ ಹಿಂದೆ ವೈದ್ಯರು ನೀಡಿದ್ದ ಔಷಧಗಳು ಹಾಗೂ ಸಲಹಾ ಚೀಟಿ ಕಳಿಸಬೇಕು. ಇದನ್ನು ಆಧರಿಸಿ ವೈದ್ಯರು ರೋಗಿಗೆ ಅಗತ್ಯ ಔಷಧದ ಸಲಹಾ ಚೀಟಿಯನ್ನು ವ್ಯಾಟ್ಸ್​ಆಪ್ ಮೂಲಕ ಕಳಿಸುತ್ತಾರೆ. ಒಂದು ವೇಳೆ ರೋಗಿಗೆ ಯಾವುದೇ ಸಂದೇಹವಿದ್ದರೆ ಮೆಡಿಕಲ್ ಶಾಪ್​ಗೆ ತೆರಳಿ ಮತ್ತೆ ವೈದ್ಯರನ್ನು ಮೊಬೈಲ್​ಫೋನ್ ಮೂಲಕ ಸಂರ್ಪಸಿದರೆ ಮೆಡಿಕಲ್ ಶಾಪ್ ಸಿಬ್ಬಂದಿಗೆ ವೈದ್ಯರು ಅಗತ್ಯ ಸೂಚನೆ ನೀಡಿ ಸರಿಯಾದ ಔಷಧ ಸಿಗುವಂತೆ ನೋಡಿಕೊಳ್ಳುತ್ತಾರೆ.

8 ದಿನಗಳಲ್ಲಿ 89 ರೋಗಿಗಳು: ಉಡುಪಿಯ ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ 8 ದಿನಗಳಿಂದ ಟೆಲಿ ಮೆಡಿಸಿನ್ ಸೇವೆ ನೀಡಲಾಗುತ್ತಿದೆ. ಈ ಅವಧಿಯಲ್ಲಿ 89 ಮಂದಿ ಇದರ ಪ್ರಯೋಜನ ಪಡೆದಿದ್ದಾರಂತೆ. 62 ವರ್ಷದ ಆಟೋ ಡ್ರೖೆವರ್ ಒಬ್ಬರು ಪುತ್ರನ ಅನಾರೋಗ್ಯಕ್ಕಾಗಿ ಟೆಲಿ ಮೆಡಿಸಿನ್ ಸೇವೆ ಉಪಯೋಗಿಸಿಕೊಂಡಿದ್ದಾರೆ. ತಂತ್ರಜ್ಞಾನದ ಬಳಕೆಯಲ್ಲಿ ಸಾಮಾನ್ಯ ಜನರೂ ಪರಿಣತಿ ಪಡೆದಿದ್ದಾರೆ ಎಂಬುದಕ್ಕೆ ಇದು ನಿದರ್ಶನ.

ಬಳ್ಳಾರಿಯಲ್ಲಿ ಪೈಲಟ್ ಪ್ರಾಜೆಕ್ಟ್: ಬಳ್ಳಾರಿ ಜಿಲ್ಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ಮಾದರಿಯಲ್ಲಿ ಟೆಲಿ ಮೆಡಿಸಿನ್ ಸೇವೆ ಒದಗಿಸಲು ಐಎಂಎ ನಿರ್ಧರಿಸಿದೆ. ಈ ಯೋಜನೆಯಲ್ಲಿ ಕಾಲ್​ಸೆಂಟರ್ ತೆರೆದು ಟೋಲ್ ಫ್ರೀ ಸಂಖ್ಯೆ ನೀಡಲಾಗುತ್ತದೆ. ತಾಲೂಕುವಾರು ತಜ್ಞ ವೈದ್ಯರ ಹೆಸರನ್ನು ಪ್ರಕಟಿಸಲಾಗುತ್ತದೆ. ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ರೋಗಿಗಳಿಗೆ ಅವರು ಬಯಸುವ ವೈದ್ಯರೊಂದಿಗೆ ಸಂವಹನಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಇನ್ನು 2 ದಿನಗಳಲ್ಲಿ ಈ ಸೇವೆ ಆರಂಭ ವಾಗಲಿದೆ ಎಂದು ಐಎಂಎ ರಾಜ್ಯಾಧ್ಯಕ್ಷ ಡಾ. ಮಧುಸೂದನ್ ಮಾಹಿತಿ ನೀಡಿದ್ದಾರೆ.

ಯಾವ ಕಾಯಿಲೆಗೆ ಟೆಲಿಮೆಡಿಸಿನ್?: ಮನೋರೋಗ, ಕೀಲá--ಮೂಳೆ ನೋವು, ಚರ್ಮ ರೋಗ, ಅಲರ್ಜಿ ಸಮಸ್ಯೆಗಳು, ಕಿವಿ, ಮೂಗು ಹಾಗೂ ಗಂಟಲು ಸಮಸ್ಯೆಗಳಿಗೆ ಟೆಲಿ ಮೆಡಿಸಿನ್ ಮೂಲಕ ಪರಿಹಾರ ಸೂಚಿಸುವುದು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು.

ಎಚ್ಚರ ತಪ್ಪಿದರೆ ಕಷ್ಟ

ಟೆಲಿ ಮೆಡಿಸಿನ್​ನಿಂದ ಎಷ್ಟು ಅನುಕೂಲವಿದೆಯೋ ಎಚ್ಚರ ತಪ್ಪಿದರೂ ಸಮಸ್ಯೆ ತಪ್ಪಿದ್ದಲ್ಲ. ವೈದ್ಯರು ಫೋನ್ ಮೂಲಕ ಸೂಚಿಸುವ ಔಷಧವನ್ನು ಬರೆದುಕೊಳ್ಳುವಾಗ ಒಂದೆರಡು ಅಕ್ಷರ ತಪ್ಪಾದರೂ ಪ್ರಾಣಕ್ಕೇ ಸಂಚಕಾರ ಬರಬಹುದು. ಇದೇ ಕಾರಣದಿಂದ ನ್ಯಾಯಾಲಯ ಟೆಲಿ ಮೆಡಿಸಿನ್ ಸೇವೆಯನ್ನು ಮಾನ್ಯ ಮಾಡಿಲ್ಲ. ಆದರೆ ಕರೊನಾ ಪರಿಣಾಮ ಕರ್ನಾಟಕ ಹಾಗೂ ಭಾರತೀಯ ವೈದ್ಯಕೀಯ ಪರಿಷತ್ ಕೆಲ ನ್ಯೂನತೆ ಸರಿಪಡಿಸಿಕೊಂಡು ತಾತ್ಕಾಲಿಕವಾಗಿ ಈ ಸೇವೆ ನೀಡಲು ಸಮ್ಮತಿಸಿವೆ.

ರಾಜ್ಯದ ಎಲ್ಲ 176 ಐಎಂಎ ಶಾಖೆಗಳ ವ್ಯಾಪ್ತಿಯಲ್ಲೂ ಈಗ ಟೆಲಿ ಮೆಡಿಸಿನ್ ಸೇವೆ ಲಭ್ಯವಿದೆ. ಪ್ರತಿ ತಾಲೂಕಿನಲ್ಲಿ ಎರಡ್ಮೂರು ವೈದ್ಯರು ಈ ಸೇವೆ ನೀಡುತ್ತಿದ್ದಾರೆ. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಇದರಿಂದ ಬಹಳ ಉಪಯೋಗವಾಗಿದೆ. ಈ ಸೇವೆ ಪಡೆಯುವ ರೋಗಿ, ಸೇವೆ ನೀಡುವ ವೈದ್ಯರು ಎಚ್ಚರಿಕೆಯಿಂದ ವರ್ತಿಸಬೇಕಾದ್ದು ಅವಶ್ಯ. | ಡಾ. ಮಧುಸೂದನ್ ಐಎಂಎ ರಾಜ್ಯಾಧ್ಯಕ್ಷ ಟೆಲಿ ಮೆಡಿಸಿನ್ ಮೂಲಕ ಮನೋವೈದ್ಯಕೀಯ ಸಮಸ್ಯೆಗಳಿಗೆ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ. ಮದ್ಯವ್ಯಸನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಪ್ತ ಸಮಾಲೋಚನೆ ಪಡೆಯುತ್ತಿದ್ದಾರೆ. ಕರೊನಾ ಬಗ್ಗೆ ಅನಗತ್ಯ ಭೀತಿ ಹೊಂದಿರುವವರೂ ಮನೋವೈದ್ಯರಿಗೆ ಕರೆ ಮಾಡಿ ಗೊಂದಲ ದೂರ ಮಾಡಿಕೊಳ್ಳುತ್ತಿದ್ದಾರೆ. | ಡಾ.ಪಿ.ವಿ.ಭಂಡಾರಿ ವೈದ್ಯಕೀಯ ನಿರ್ದೇಶಕ, ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಪ್ರಸ್ತುತ ಟೆಲಿ ಮೆಡಿಸಿನ್ ಹಾಗೂ ಟೆಲಿ ಹೆಲ್ತ್ ಹೆಚ್ಚು ಉಪಯೋಗವಾಗುತ್ತಿದೆ. ಆದರೆ ಈ ವೇಳೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ರೋಗಿಯ ಹೆಸರು ಹಾಗೂ ಆತ ನೀಡುವ ಮಾಹಿತಿಯನ್ನು ವೈದ್ಯರು ಗುಪ್ತವಾಗಿ ಇರಿಸುವ ಮೂಲಕ ನೈತಿಕತೆ ಕಾಯ್ದುಕೊಳ್ಳಬೇಕು. | ಡಾ. ಕೆ.ಆರ್.ಶ್ರೀಧರ್ ಮನೋವೈದ್ಯ, ಶಿವಮೊಗ್ಗ

| ಅರವಿಂದ ಅಕ್ಲಾಪುರಶಿವ