ಜಿಲ್ಲೆ

ಅಧ್ಯಕ್ಷರಾಗಿ ತೇಜೇಂದ್ರ ಕುಮಾರ್ ಆಯ್ಕೆ

ಪ್ರಸಿನ್ ಕೆ.ಆರ್

ಮಳವಳ್ಳಿ: ತಾಲೂಕಿನ ಕೆಂಬುತಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಿತು.

ಗ್ರಾಮದ ಸೊಸೈಟಿ ಸಭಾಂಗಣದಲ್ಲಿ ಚುನಾವಣೆ ನಿಗದಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ತೇಜೇಂದ್ರ ಕುಮಾರ್ ಮತ್ತು ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪರಾಜು ಮತ್ತು ಬಿಲ್ಲಯ್ಯ ರಾಮು ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ 13 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ತೇಜೇಂದ್ರ ಕುಮಾರ್, ಉಪಾಧ್ಯಕ್ಷ ಸ್ಥಾನದ ಕೆಂಪರಾಜು ತಲಾ 8 ಮತ ಪಡೆದು ವಿಜೇತರಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ತ್ಯಾಗರಾಜು ಕರ್ತವ್ಯ ನಿರ್ವಹಿಸಿದ್ದರು.

ನೂತನ ಅಧ್ಯಕ್ಷರಾಗಿ ಚುನಾಯಿತರಾದ ತೇಜೇಂದ್ರ ಕುಮಾರ್ ಮಾತನಾಡಿ, ಇಲ್ಲಿನ ಸೊಸೈಟಿ ನಿರ್ದೇಶಕನಾಗಲು ಮತ ನೀಡಿದ ಸದಸ್ಯರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತಗೊಳಿಸಿದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ಎಲ್ಲರ ಸಹಕಾರ ಪಡೆದುಕೊಂಡು ರೈತರಿಗೆ ಅನುಕೂಲಕರವಾದ ಕಾರ್ಯಗಳನ್ನು ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು ಹಾಗೂ ಮುಖಂಡರು ಅಭಿನಂದಿಸಿದರು.

ನಿರ್ದೇಶಕರಾದ ಕುಮಾರ್, ಕಿರಣ್, ಪುಟ್ಟಸ್ವಾಮಿ, ಗಿರೀಶ್, ಜಯಮ್ಮ, ರಾಜಣ್ಣ, ಮುಖಂಡರಾದ ಪುಟ್ಟರಾಜು, ಶಂಕರೇಗೌಡ, ಚಿಕ್ಕೀರಪ್ಪ, ಮಹದೇವಸ್ವಾಮಿ ಇತರರು ಇದ್ದರು.