ಪಿರಿಯಾಪಟ್ಟಣ: ಮಳೆಯಿಂದ ರೈತರಿಗೆ ಉಂಟಾಗಿರುವ ಬೆಳೆ ಹಾನಿ ಪರಿಹಾರ ಒದಗಿಸಿಕೊಡುವ ಸಂಬಂಧ ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಸುರೇಂದ್ರ ಮೂರ್ತಿ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಬೋರೆಹೊಸಹಳ್ಳಿ ಗ್ರಾಮದಲ್ಲಿ ಮಳೆಯಿಂದ ಬೆಳೆ ಹಾನಿಯಾದ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿದ ತಹಸೀಲ್ದಾರ್ ಸುರೇಂದ್ರಮೂರ್ತಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಸತತವಾಗಿ ಬಿದ್ದ ಮಳೆಯಿಂದಾಗಿ ರೈತರು ನಾಟಿ ಮಾಡಿದ್ದ ತಂಬಾಕು, ಬಿತ್ತನೆ ಮಾಡಿದ್ದ ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಈ ಸಂಬಂಧ ರೈತರು ಸೂಕ್ತ ದಾಖಲಾತಿಗಳನ್ನು ಒದಗಿಸಿದರೆ ಸರ್ಕಾರದಿಂದ ನೀಡುವ ಬೆಳೆ ಪರಿಹಾರ ಒದಗಿಸಿಕೊಡಲು ಸಹಕಾರಿಯಾಗುತ್ತದೆ. ಬೆಳೆ ನಾಶವಾಗಿರುವ ರೈತರು ತಮ್ಮ ತಮ್ಮ ಗ್ರಾಮ ಲೆಕ್ಕಾಧಿಕಾರಿ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಮಾತನಾಡಿ, ಬೆಳೆ ನಾಶವಾಗಿರುವ ರೈತರು ತಮ್ಮ ಜಮೀನಿನ ಆರ್‌ಟಿಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಬೆಳೆ ನಾಶವಾಗಿರುವ ಸ್ಥಳದ ಜಿಪಿಎಸ್ ಫೋಟೋಗಳನ್ನು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಮೂಲಕ ಮಾಹಿತಿ ನೀಡಿದರೆ, ಬೆಳೆ ಪರಿಹಾರ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಹಾರನಹಳ್ಳಿ, ಚಪ್ಪರದಹಳ್ಳಿ, ಚನಕಲ್ ಕಾವಲ್, ಸುಂಡವಾಳು ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆಯಲಾಯಿತು.