ಹೂವಿನಹಡಗಲಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅ.30ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಜನತಾದರ್ಶನ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಶರಣಮ್ಮ ತಿಳಿಸಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕಿನ ಪ್ರತಿ ಇಲಾಖೆಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಕೇಂದ್ರಗಳನ್ನು ತೆರೆಯಬೇಕು. ಇ-ಆಫೀಸ್ ದೂರುಗಳನ್ನು ದಾಖಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಮುಂದಾಗಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರದರ್ಶನ ಮಾಡುವುದರ ಜತೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.
ತಾಪಂ ಇಒ ಡಾ.ಜಯರಾಮ.ಎಂ.ಚೌವ್ಹಾಣ ಮಾತನಾಡಿ, ಕುಂದುಕೊರತೆ ಆಲಿಸುವ ಕೇಂದ್ರಗಳಿಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕು ಎಂದು ಹೇಳಿದರು. ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಬಿಇಒ ಮಹೇಶ್ ಪೂಜಾರ್, ಗ್ರೇಡ್-2 ತಹಸೀಲ್ದಾರ್ ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್ ಇನ್ನಿತರರಿದ್ದರು.