ಹಿರೇಕೆರೂರ: ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ರೈತರ ಮೆಕ್ಕೆಜೋಳ ಬೆಳೆಗೆ ಸಮರ್ಪಕವಾಗಿ ವಿಮೆ ಕಂಪನಿಯವರು ಬೆಳೆ ವಿಮೆ ವಿತರಿಸದಿರುವುದನ್ನು ಖಂಡಿಸಿ ಕೆ.ಎಸ್. ಪುಟ್ಟಣ್ಣಯ್ಯ ಬಣದ ರೈತ ಸಂಘದಿಂದ ಏಕಾಏಕಿ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಬರಗಾಲ ಆವರಿಸಿದ್ದು, ರೈತರು ಮೆಕ್ಕೆಜೋಳದ ವಿಮೆ ಮಾಡಿಸಿದ್ದರು. ಕೇವಲ 5 ಗ್ರಾಮ ಪಂಚಾಯಿತಿಗಳು ಮಾತ್ರ ಬೆಳೆ ವಿಮಾ ಬಿಡುಗಡೆ ಮಾಡಿ ಉಳಿದ ಗ್ರಾಪಂ ಜಿರೋ ಮಾಡಿದ್ದು, ವಿಮಾ ಕಂಪನಿಯವರು ಅದಕ್ಕೆ ತಕ್ಕ ಬೆಳೆ ವಿಮೆ ಪರಿಹಾರ ವಿತರಣೆ ಮಾಡದೆ ತಾರತಮ್ಯ ನೀತಿ ಅನುಸರಿಸಿದ್ದಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಬಾಕಿ ಇರುವ ರೈತರಿಗೆ ಬೆಳೆ ವಿಮೆ ಹಣ ಜಮಾ ಮಾಡಬೇಕು. ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ನೀಡದೆ ಮೋಸವೆಸಗಿದ ವಿಮಾ ಕಂಪನಿಯ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಆ ಕಂಪನಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಈ ಕುರಿತು ಕುಲಕಂಷವಾಗಿ ಪರಿಶೀಲನೆ ನಡೆಸಬೇಕು. ವಿಮಾ ಕಂಪನಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಶಂಕ್ರಗೌಡ ಶಿರಗಂಬಿ, ಶಂಭು ಮುತ್ತಗಿ, ಈರಪ್ಪ ಮಳ್ಳೂರ, ಲೋಕಪ್ಪ ಮುಚುಡಿ, ಈರಪ್ಪ ಕಣಸೋಗಿ, ಬಸವರಾಜ ಅಂಗಡಿ, ಇತರರಿದ್ದರು.