ಮುಧೋಳ ನಗರದ ಕಾನಿಪ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಗಪ್ಪ ಅಂಬಿ ಮಾತನಾಡಿದರು. ನಾರಾಯಣ ಯಡಹಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ, ಬಿಜೆಪಿ ಮುಖಂಡ ಶ್ರೀಶೈಲ ಚಿನ್ನನವರ ಇದ್ದರು. 
ಜಿಲ್ಲೆ

ಬಿಜೆಪಿಯಿಂದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ರೈತರಿಗೆ ವಕ್ಫನಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ನ.5 ರಿಂದ ಮುಧೋಳದಲ್ಲಿ ಹೋರಾಟ ಮಾಡಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಬಿಜೆಪಿ ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ನಾಗಪ್ಪ ಅಂಬಿ ಹೇಳಿದರು.

ನಗರದ ಕಾನಿಪ ಸಂಘದ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿ ರೈತರಿಗೆ ಕಾನೂನು ಹೋರಾಟಕ್ಕೆ ಬೇಕಾದ ನೆರವು ನೀಡಲಿದೆ. ಇದೊಂದು ಲ್ಯಾಂಡ್ ಜಿಹಾದ್ ರೂಪದಂತಿದೆ. ಇದರ ವಿರುದ್ಧ ರೈತರು ಶೀಘ್ರ ಪಹಣಿ ಪರಿಶೀಲನಾ ಅಭಿಯಾನ ನಡೆಸಲಿದ್ದಾರೆ. ಇದನ್ನು ಬಿಜೆಪಿ ಬೆಂಬಲಿಸಲಿದೆ. ಆದಿಲ್ ಶಾಹಿ, ತುಘಲಕ್ ಮಾದರಿ ಆಡಳಿತ ರಾಜ್ಯದಲ್ಲಿ ಜಾರಿಗೊಂಡಿದೆ. ಪಹಣಿ ಪ್ರದರ್ಶಿಸಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಇಡೀ ವಿಜಯಪುರ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್, ಬೀದರ್ ಜಿಲ್ಲೆಯಲ್ಲೂ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿದ್ದಾರೆ. ದೆಹಲಿಯಲ್ಲಿ ಸಂಸತ್ತು ಇರುವ ಜಾಗ ಸೇರಿ ಲಕ್ಷಾಂತರ ಹೆಕ್ಟೇರ್ ಜಾಗ ನಮ್ಮದು ಎಂದಿದ್ದಾರೆ. ಹಲವೆಡೆ ದೇವಸ್ಥಾನ, ದೇವಾಲಯದ ಭೂಮಿಯೂ ನಮ್ಮದೆನ್ನುತ್ತಿದ್ದಾರೆ. ರೈತರು ಎಲ್ಲಿಗೆ ಗುಳೆ ಹೋಗಬೇಕು. ಸಿಎಂ ಸೂಚನೆ ಮೇರೆಗೆ ಎಂದು ಜಮೀರ್ ಅಹ್ಮದ್ ಮಾತನಾಡಿದ್ದಾರೆ. ಇದು ಕೇವಲ ಬಿಜೆಪಿ ಹೋರಾಟವಲ್ಲ. ಸಂತ್ರಸ್ತ ರೈತರು, ಎಲ್ಲ ವರ್ಗದ ಜನರ ಹೋರಾಟ. ಮಠಾಧೀಶರೂ ತಮ್ಮ ಮಠಕ್ಕೆ ಮುಂದೆ ಹೀಗೆ ಆಗಬಹುದೆಂದು ಆತಂಕ ಹೊಂದಿದ್ದಾರೆ. ರಾಜ್ಯಾದ್ಯಂತ ಈ ಹೋರಾಟ ಬಲಿಷ್ಠಗೊಳ್ಳಲಿದ್ದು ಸಾವಿರಾರು ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ ಮಾತನಾಡಿ, ಕಾಂಗ್ರೆಸ್ಸಿನಿಂದ ಮುಸ್ಲಿಂ ತುಷ್ಟೀಕರಣ ವಿರುದ್ಧ ಹೋರಾಟ ಇದು. ದೇವಸ್ಥಾನ, ಮಠಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದು, ಸ್ಮಶಾನವನ್ನೂ ವಶಕ್ಕೆ ಪಡೆಯಲು ಸರ್ಕಾರ ಕುಮ್ಮಕ್ಕು ಕೊಡುತ್ತಿದೆ. ಇಡೀ ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಸಮಸ್ಯೆ ಇದೆ. ಮೊದಲು ಇದು ವಿಜಯಪುರ ಜಿಲ್ಲೆಯ ಸಮಸ್ಯೆ ಅಂದುಕೊಂಡಿದ್ದರು. ಈಗ ಚನ್ನಪಟ್ಟಣ, ಧಾರವಾಡ, ಬೀದರ್, ಮಂಡ್ಯದ ನಾಗಮಂಗಲ, ಕೊಪ್ಪಳ ಜಿಲ್ಲೆ- ಹೀಗೆ ದಿನ ಕಳೆದಂತೆ ಹಬ್ಬುತ್ತ ಸಾಗಿದೆ. ಇದು ಕ್ಯಾನ್ಸರ್ ಥರ ಹಬ್ಬುತ್ತಿದೆ. ನಮ್ಮ ತಾಲೂಕಿನಲ್ಲೂ ಹಡರುತ್ತಿದೆ ಎಂದು ಹೇಳಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ, ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ, ಬಿಜೆಪಿ ಮುಖಂಡ ಶ್ರೀಶೈಲ್ ಚಿನ್ನನವರ ಇದ್ದರು.