ಮಂಗಳೂರು: ಮಂಗಳೂರಿನಿಂದ ಅಪಹರಣಗೊಂಡಿದ್ದಳು ಎನ್ನಲಾದ 16 ವರ್ಷ ವಯಸ್ಸಿನ ಬಾಲಕಿಯನ್ನು ರೈಲ್ವೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ.
ಏ.9ರಂದು ಬೆಳಗ್ಗೆ 8ರ ವೇಳೆಗೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಶಂಕಾಸ್ಪದ ರೀತಿಯಲ್ಲಿ ಇದ್ದ ಬಾಲಕಿಯನ್ನು ರೈಲ್ವೆ ಸುರಕ್ಷತಾ ದಳ ಸಿಬ್ಬಂದಿ ವಿಚಾರಿಸಿದರು. ಆ ವೇಳೆ, ಈಕೆ ಮಂಗಳೂರಿನವಳು. 8ರಂದು ಯುವಕನೊಬ್ಬ ಬೆಂಗಳೂರಿಗೆ ಕರೆದುಕೊಂಡು ಬಂದಿರುವುದು ಗೊತ್ತಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಯುವಕನೂ ಅಪ್ರಾಪ್ತನಾಗಿದ್ದಾನೆ. ಇಬ್ಪರೂ ಮೂಲತಃ ಹೊರ ರಾಜ್ಯದವರು. ಪಾಲಕರು ಮಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಲಕಿ ನಾಪತ್ತೆ ಬಗ್ಗೆ ಆಕೆಯ ತಂದೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ಏ.8ರಂದು ದೂರು ನೀಡಿದ್ದರು. ಬಾಲಕಿಯನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.