ಜಿಲ್ಲೆ

ಪ್ರಸ್ತುತದಲ್ಲಿ ತಂತ್ರಜ್ಞಾನ ಕಲಿಕೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸ್ತುತ ಸ್ಪರ್ಧಾತ್ಮಕ ಔದ್ಯೋಗಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನದ ಕಲಿಕೆ ಅಗತ್ಯವಾಗಿದ್ದು, ನಮ್ಮ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಗಣಿತಶಾಸ್ತ್ರ ವಿಭಾಗ, ಬೆಂಗಳೂರಿನ ಕೋರೆಲ್​ ಟೆಕ್ನಾಲಜೀಸ್​ ಸಹಯೋಗದಲ್ಲಿ ಸೆನೆಟ್​ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೆಟ್​ ಲ್ಯಾಬ್​ ಕುರಿತ ಗಣಿತ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದೇಶ ಮತ್ತು ವಿದೇಶಗಳಲ್ಲಿ ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರದಂತಹ ಕೋರ್ಸಗಳ ಕಲಿಕೆ ಜತೆಗೆ ಕಂಪ್ಯೂಟಿಂಗ್​ ಕೌಶಲ ಅರಿತರೆ ಸುಲಭವಾಗಿ ಉದ್ಯೋಗ ಪಡೆಯಬಹುದು. ಪ್ರಸ್ತುತ ಕೃತಕ ಬುದ್ಧಿಮತ್ತೆ, ಡಾಟಾ ವಿಶ್ಲೇಷಣೆ ಕಲಿಕೆಗೆ ಗಣಿತ ಪೂರಕ ವಿಷಯವಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ಮಾರುಕಟ್ಟೆ ಬೇಡಿಕೆಯಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಪ್ರೊ. ಆರ್​.ಎಫ್​. ಭಜಂತ್ರಿ ಮಾತನಾಡಿ, ವಿಜ್ಞಾನದ ಅನೇಕ ವಿಷಯಗಳಲ್ಲಿ ಗಣಿತ ಹಾಸುಹೊಕ್ಕಾಗಿದೆ. ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ಸಂಬಂಧ ಹೊಂದಿವೆ. ಪಿಎಂ ಉಷಾ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಗಿದ್ದು, ವೃತ್ತಿಪರ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಬೆಳಸುವ ಉದ್ದೇಶದಿಂದ ತರಬೇತಿ, ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು ಈ ಯೋಜನೆಯಲ್ಲಿ ಆಯೋಜಿಸಲು ಅನುಕೂಲವಾಗಿದೆ ಎಂದರು.

4 ದಿನಗಳ ಶಿಬಿರದಲ್ಲಿ ಬೆಂಗಳೂರು, ಗೋವಾ ಹಾಗೂ ಬೆಳಗಾವಿಯಿಂದ ಪ್ರಾಧ್ಯಾಪಕರು ಆಗಮಿಸಿದ್ದರು. ಗಣಿತಶಾಸ್ತ್ರದ ಮುಖ್ಯಸ್ಥ ಪ್ರೊ.ಎಸ್​.ಸಿ.ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕರಾದ ಪ್ರೊ. ಪಿ.ಜಿ. ಪಾಟೀಲ, ಪ್ರೊ. ಎಚ್​.ಎಸ್​. ರಾಮನೆ, ಡಾ. ಬಿ. ಪರ್ವತಾಲು, ಪ್ರೊ. ಎನ್​. ನಾಗರಾಜ, ಡಾ. ಆರ್​.ಎಫ್​. ಭಜಂತ್ರಿ, ಡಾ.ಆರ್​.ಎಸ್​. ದ್ಯಾವನಾಳ, ಡಾ.ಆಶಾ.ಎಸ್​.ಕೆ, ಇತರರು ಇದ್ದರು.