ಜಿಲ್ಲೆ

ತಂತ್ರಜ್ಞಾನದಿಂದ ಪತ್ರಿಕೋದ್ಯಮ ಸ್ವರೂಪ ಬದಲು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿನ ಪತ್ರಿಕೋದ್ಯಮಕ್ಕೆ ಪ್ರಾಯೋಗಿಕ ಜ್ಞಾನ ಅಪೇಕ್ಷಣಿಯವಾಗಿದ್ದು, ತಂತ್ರಜ್ಞಾನದ ಪ್ರಭಾವದಿಂದ ಪತ್ರಿಕೋದ್ಯಮದ ಸ್ವರೂಪ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಇಂದಿನ ಯುವ ಸಮೂಹ ತಂತ್ರಜ್ಞಾನ ಕೌಶಲ ಬೆಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಇತ್ತೀಚೆಗೆ ಆಯೋಜಿಸಿದ್ದ ಮೊಹರೆ ಹನುಮಂತರಾಯ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಂಪ್ಯೂಟರ್​ ಆಧಾರಿತ ತಂತ್ರಾಂಶಗಳು ಇಂದು ಸುದ್ದಿ ಮನೆ ಆವರಿಸಿವೆ. ತಂತ್ರಜ್ಞಾನದಿಂದ ಪತ್ರಿಕೋದ್ಯಮ ವೃತ್ತಿಯ ಸ್ವರೂಪ ಬದಲಾಗಿದೆ. ತಂತ್ರಜ್ಞಾನ ಸಹಾಯದಿಂದ ತ್ವರಿತವಾಗಿ ಸುದ್ದಿ ಕಳಿಸಲು ಹೆಚ್ಚು ಅನುಕೂಲಕರವಾಗಿದೆ. ತಂತ್ರಜ್ಞಾನದ ಮೇಲೆ ಹೆಚ್ಚಿನ ಅವಲಂಬನೆಯಿಂದ ವ್ಯಕ್ತಿಯ ಸೃಜನಶೀಲತೆ ಕಡಿಮೆ ಆಗುತ್ತಿದೆ ಎಂದರು.

ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ.ಚಂದುನವರ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ಮೊಹರೆ ಹನುಮಂತರಾಯರ ಕೊಡುಗೆ ಅಪಾರ. ಅಖಿಲ ಭಾರತದ ಮಟ್ಟದಲ್ಲಿ ಕನ್ನಡ ಪತ್ರಿಕೋದ್ಯಮ ಬೆಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಮೊಹರೆ ಹನುಮಂತರಾಯರ ಪಾತ್ರ ಸಹ ಇದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪತ್ರಕರ್ತರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸಂಜಯಕುಮಾರ ಮಾಲಗತ್ತಿ ಮಾತನಾಡಿದರು. ಅಪರಾಧ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ವೇಣುಮಾಧವ, ಪ್ರೊ. ಜಯಲಕ್ಷ್ಮೀ ಯಂಡಿಗೇರಿ, ಪ್ರೊ. ಎಂ.ಎಂ. ಪಾಟೀಲ, ಡಾ. ವಿಶ್ವನಾಥ ಚಿಂತಾಮಣಿ, ಡಾ. ವಿಶ್ವನಾಥ ಕೋಟಿ, ಡಾ.ಮಂಜುನಾಥ ಅಡಿಗಲ್​, ಡಾ. ನಾಗರಾಜ ರೋಣದ, ಡಾ.ಶಂಕುತಲಾ ಸೊರಟೂರ, ಡಾ.ಪ್ರಭಾಕರ ಕಾಂಬಳೆ, ವಿನಾಯಕ ಎತ್ತಿನಮನಿ, ಇತರರು ಇದ್ದರು.