ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ಸಭಾಗಿತ್ವದಲ್ಲಿ ಪರಿಣತ ವಿಜ್ಞಾನಿಗಳ ತಂಡಗಳನ್ನು ರಚಿಸಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಬುಧವಾರ ತೋವಿವಿ ಸಭಾಭವನದಲ್ಲಿ ಹಮ್ಮಿಕೊಂಡ ಮೊದಲನೇ ಹಂತದ ತ್ರೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕೆ ವಿವಿಯು ಕಳೆದ ದಶಕದಿಂದ ತೋಟಗಾರಿಕಾ ಬೆಳೆಗಳಾದ ತರಕಾರಿ, ಹಣ್ಣು, ಹೂಗಳು, ತೋಟಪಟ್ಟಿ ಹಾಗೂ ಮಸಾಲ ಬೆಳೆಗಳಲ್ಲಿ 40ಕ್ಕೂ ಹೆಚ್ಚು ಅಧಿಕ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡಲಾಗಿದೆ. ಇನ್ನು ಮುಂದೆ ವಿಸ್ತರಣಾ ಚಟುವಟಿಕೆಯನ್ನು ರೈತರ ಕ್ಷೇತ್ರಗಳಲ್ಲಿಯೇ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳತ್ತ ಆರ್ಥಿಕ ಭದ್ರತೆಗಾಗಿ ರೈತರು, ಯುವಕ, ಯುವತಿಯರು ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಶ್ವವಿದ್ಯಾಲಯದ ಸಂಶೋಧನಾ ಲ ರೈತರ ಅಭಿವೃದ್ಧಿಗಾಗಿಯೇ ಇರುವುದರಿಂದ ಇಂದು ವಿಶ್ವವಿದ್ಯಾಲಯದ ನಡೆ ರೈತರ ಹೊಲದ ಕಡೆದತ್ತ ಸಾಗಬೇಕಾಗಿದೆ. ಅನೇಕ ಹಣ್ಣಿನ ವಿವಿಧ ತಳಿಗಳ ಸಸ್ಯ ಅಭಿವೃದ್ಧಿ ಮಾಡಿ ತರಕಾರಿ ಬೀಜಗಳನ್ನು ಉತ್ಪಾದಿಸಿ ಪುಷ್ಪೋದ್ಯಮಗಳಿಂದ ಅನೇಕ ಅಲಂಕಾರಿಕ ಸಸಿಗಳನ್ನು ವೃದ್ಧಿಸಿ ರೈತರಿಗೆ ನೀಡಲಾಗಿದೆ. ಅವಳಿ ಜಿಲ್ಲೆಗಳಲ್ಲಿ ದಾಳಿಂಬೆ, ದ್ರಾಕ್ಷಿ, ನಿಂಬೆ, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ರೈತರ ವಾಣಿಜ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರುವ ಜೈವಿಕ ಪೀಡೆನಾಶಕಗಳು ಹಾಗೂ ಜೈವಿಕ ರಸಗೊಬ್ಬರಗಳ ಬಳಕೆಯನ್ನು ವ್ಯಾಪಕವಾಗಿ ಬಳಸುವಂತೆ ರೈತರ ಕ್ಷೇತ್ರದಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಲು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ, ಕಳೆದ ವರ್ಷ 56 ಸಾವಿರ ಹೆಕ್ಟೇರ್ ಪ್ರದೇಶ ತೋಟಗಾರಿಕಾ ಕ್ಷೇತ್ರವಿದ್ದದ್ದು ಈ ವರ್ಷ 75 ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ತೋಟಗಾರಿಕಾ ಬೆಳೆಗಳ ವ್ಯಾಪ್ತಿಯಾಗುವ ಸಂಭವವಿದೆ. ಜಿಲ್ಲೆಯ ಕಬ್ಬು ಬೆಳೆಯ ಪರ್ಯಾಯ ಬೆಳೆಗಳಾಗಿ ರೈತರು ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದರಿಂದ ಅವಳಿ ಜಿಲ್ಲೆಗಳ ಧನಾತ್ಮಕ ಬೆಳವಣಿಗೆಯಾಗಿದೆ ಎಂದರು.
ಅರಿಶಿಣ, ಪಪ್ಪಾಯಿ ಬೆಳೆಗಳಲ್ಲಿ ಕಂಡು ಬರುವ ವಿವಿಧ ರೋಗಗಳಿಗೆ ಸೂಕ್ತವಾದ ತಾಂತ್ರಿಕೆ ಹಾಗೂ ಔಷಧ ಉಪಚಾರವನ್ನು ಸಸ್ಯರೋಗ ಪ್ರಾಧ್ಯಾಪಕ ಡಾ. ಬಸವರಾಜಪ್ಪ ಎಂ.ಪಿ., ಹಣ್ಣು ಹೂವು ಕಾಯಿಪಲ್ಲೆಗಳಿಗೆ ಬರುವ ಕೀಟ ನಿಯಂತ್ರಣಗೊಳಿಸಲು ಸಾವಯವಯುಕ್ತ, ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳ ಬಳಕೆ ಕುರಿತು ಕೀಟಶಾಸದ ಸಹಾಯಕ ಪ್ರಾಧ್ಯಾಪಕ ಡಾ. ರಾಮನಗೌಡ ಹಡ್ಲಿಗೇರಿ, ತೆಂಗಿನ ಮಿಡಿಕಾಯಿ ಉದುರುವ ಸಮಸ್ಯೆಗೆ ತಾಂತ್ರಿಕತೆಗಳನ್ನು ಸಹ ಪ್ರಾಧ್ಯಾಪಕ ಡಾಕ್ಟರ್ ವಿಜಯಕುಮಾರ್ ನಾರಾಯಣಪುರ, ಹೂ ಬೆಳೆಗಳಾದ ಸೇವಂತಿಗೆ, ಚೆಂಡು ಹಾಗೂ ಗುಲಾಬಿ ಬೇಸಾಯ ಉತ್ಪಾದನಾ ತಾಂತ್ರಿಕತೆ ಹಾಗೂ ನೂತನ ತಳಿಗಳ ಪರಿಚಯವನ್ನು ಪುಷ್ಪೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ಪಾಟೀಲ ಮಾಡಿಕೊಟ್ಟರು. ತೋವಿವಿಯ ಪ್ರಾಧ್ಯಾಪಕ ಡಾ. ವಸಂತ ಗಾಣಿಗೇರ, ಹಣ್ಣು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆನಂದ ನಂಜಪ್ಪನವರು, ಬೀಜ ವಿಜ್ಞಾನದ ಸಹಪ್ರಾಧ್ಯಾಪಕಿ ಡಾ. ಪಲ್ಲವಿ ಎಂ., ವಿಸ್ತರಣಾ ನಿರ್ದೇಶಕಿ ಡಾ.ಲಕ್ಷ್ಮೀನಾರಾಯಣ ಹೆಗಡೆ, ಡಾ.ಎಂ.ಎಸ್. ಲೋಕೇಶ, ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ.ಜಿ. ಭುವನೇಶ್ವರಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.