ಚಿಕ್ಕಮಗಳೂರು: ನಗರದಲ್ಲಿ 72 ಆಸನಗಳ ಸಾಮರ್ಥ್ಯದ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಹೆಚ್ಚಿನ ಜಮೀನು ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿ ತಿಂಗಳ ಒಳಗೆ ತಾಂತ್ರಿಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆನಂದಸಿಂಗ್ ತಿಳಿಸಿದರು. ಗೌಡನಹಳ್ಳಿಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸಲು ಗುರುತಿಸಿರುವ ಪ್ರದೇಶ ಪರಿಶೀಲಿಸಿ ಯೋಜನೆ ಕಾರ್ಯಗತದ ಸಂಬಂಧ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
72 ಆಸನಗಳ ವಿಮಾನ ನಿಲ್ದಾಣ ಸೂಕ್ತ:
ನಗರದಲ್ಲಿ ಅನೇಕ ವರ್ಷಗಳಿಂದ ವಿಮಾನ ನಿಲ್ದಾಣ ಯೋಜನೆ ನನೆಗುದಿಗೆ ಬಿದ್ದಿತ್ತು. ವ್ಯಾಪಾರಿಗಳು ಹಾಗೂ ಈ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ಇಲ್ಲಿಗೆ ಎಟಿಆರ್ 72 ಆಸನಗಳ ಸಾಮರ್ಥ್ಯದ ವಿಮಾನಗಳಿಗೆ ನಿಲ್ದಾಣ ನಿರ್ಮಾಣ ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯ. ತಾಂತ್ರಿಕ ವರದಿ ಕೈ ಸೇರುವವರೆಗೂ ಈ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಈಗಾಗಲೇ ಶಿವಮೊಗ್ಗದ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣ ಕೊನೆಯಲ್ಲಿ ರದ್ದಾಯಿತು. ಅಂತೆಯೇ ಈ ಪ್ರದೇಶದ ಆಸುಪಾಸಿನಲ್ಲಿ ಕೈಗಾರಿಕೆಗಳಿರುವ ಬಗ್ಗೆ ಗಮನ ಸೆಳೆದಾಗ ಈ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಕೂಡ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಒಂದು ವೇಳೆ ಈ ಸ್ಥಳ ಸೂಕ್ತವಾಗದಿದ್ದಲ್ಲಿ 300 ಎಕರೆ ಭೂಮಿ ಲಭ್ಯವಿರುವ ಇನ್ನೊಂದು ಸ್ಥಳದ ಬಗ್ಗೆ ಸ್ಥಳೀಯರು ಸಲಹೆ ನೀಡಿದ್ದು, ಅಧಿಕಾರಿಗಳು ಈ ಎರಡು ಪ್ರಸ್ತಾವನೆಗಳನ್ನು ಪರಿಶೀಲಿಸಿ ಮೇ 15ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
200 ಎಕರೆ ಭೂಮಿ ಅಗತ್ಯ:
ಎಟಿಆರ್ ವಿಮಾನ ನಿಲ್ದಾಣಕ್ಕೆ ಇನ್ನೂ 19 ಎಕರೆ ಅಗತ್ಯವಿದೆ. ಯೋಜನೆಗೆ ಸುಮಾರು 38 ಕೋಟಿ ರೂ. ಅವಶ್ಯಕತೆ ಇದ್ದು ಅದಕ್ಕೆ ಅನುಗುಣವಾಗಿ 19 ಎಕರೆ ಭೂ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಲಾಗಿತ್ತು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಅಧಿಕಾರಿಗಳ ಸಲಹೆ ಪ್ರಕಾರ 72 ಸೀಟುಗಳ ಕಮರ್ಷಿಯಲ್ ಎಟಿಆರ್ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 200 ಎಕರೆ ಭೂಮಿ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಗಳಿಂದ ತಾಂತ್ರಿಕ ಕಾರ್ಯ ಸಾಧ್ಯತೆ ಬಗ್ಗೆ ವರದಿ ಪಡೆದು ಭೂಮಿ ಲಭ್ಯತೆ ಬಗ್ಗೆ ಸರ್ವೇ ಮಾಡಿಸಿ ಎಷ್ಟು ಹಣಕಾಸಿನ ಅವಶ್ಯಕತೆ ಇದೆ? ಮೊದಲಿಗೆ ತಾಂತ್ರಿಕವಾಗಿ ಇದು ಸೂಕ್ತ ಸ್ಥಳವೇ ಎನ್ನುವುದರ ಬಗ್ಗೆ ವರದಿ ಪಡೆದು ಮತ್ತೆ ಸಚಿವ ಆನಂದ್‍ಸಿಂಗ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಹೀಗಿದ್ದರೂ ಈ ಪ್ರದೇಶಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಸೂಕ್ತ ಜಾಗ ಸಿಕ್ಕಲ್ಲಿ ಮಾತ್ರ ಮುಂದಿನ ತೀರ್ಮಾನ ಎಂದು ತಿಳಿಸಿದರು.
ಟೆಂಡರ್ ನಲ್ಲಿ ಭಾಗವಹಿಸದೆ ನೆನೆಗುದಿಗೆ:
ನಮ್ಮ ದೇಶದಲ್ಲಿ 40 ಆಸನಗಳ ವಿಮಾನಗಳು ಲಭ್ಯವಿಲ್ಲ. 10 ಸೀಟುಗಳ ಖಾಸಗಿ ವಿಮಾನಗಳಿವೆ. ಅದಕ್ಕೆ ಅನುಗುಣವಾಗಿ ಏರ್ ಸ್ಟ್ರಿಪ್ ನಿರ್ಮಿಸುವ ಚಿಂತನೆ ಇತ್ತು. ಅವುಗಳ ಹೊರತಾಗಿ 72 ಆಸನಗಳ ಎಟಿಆರ್ ವಿಮಾನಗಳಿವೆ. ಈ ಮೊದಲು ಖಾಸಗಿ ಸಹಭಾಗಿತ್ವದಲ್ಲಿ ಎರಡು ಬಾರಿ ಕರೆದಿದ್ದ ಟೆಂಡರ್‍ನಲ್ಲಿ ಯಾರೂ ಭಾಗವಹಿಸಲಿಲ್ಲ. ಹಾಗಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು ಎಂದರು. ಯೋಜನೆ ಸಲಹೆಗಾರ ಬ್ರಿಗೇಡಿಯರ್ ಪೂರ್ವಿಮಠ್ ಮಾತನಾಡಿ, 72 ಆಸನ ಸಾಮರ್ಥ್ಯದ ವಿಮಾನ ಇಳಿದಾಣಕ್ಕೆ 350 ಎಕರೆಗಳ ಅವಶ್ಯಕತೆ ಇದೆ ಎಂದು ಗಮನ ಸೆಳೆದರು. ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್, ಕ್ಯಾಪ್ಟನ್ ಶಮಂತ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ. ಎಸ್‍ಪಿ ಎಂ.ಎಚ್.ಅಕ್ಷಯ್, ಎಸಿ ಡಾ.ಎಚ್.ಎಲ್.ನಾಗರಾಜ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು, ಉಪ ನಿರ್ದೇಶಕ ಕೆ.ಎಸ್.ರವಿಪ್ರಸಾದ್ ಇದ್ದರು.