ಚಿಂತಾಮಣಿ: ರೇಷ್ಮೆಗೂಡು ಹರಾಜು ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಾರಿಗೆ ತಂದಿರುವ ಆನ್‌ಲೈನ್ ಬಿಡ್ಡಿಂಗ್ ವ್ಯವಸ್ಥೆಗೂ ಹತ್ತಾರು ಸಮಸ್ಯೆ ಶುರುವಾಗಿದೆ. ಬಿಡ್ ಮಾಡುವ ಕೊನೆಯ ಕ್ಷಣದಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ತೂಕ ಮಾಡಲಾಗದೆ ರೈತರು ಸಮಸ್ಯೆ ಎದುರಿಸುವಂತಾಗಿದೆ.
ನಗರದ ಚೇಳೂರು ರಸ್ತೆಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶುಕ್ರವಾರ ಆನ್‌ಲೈನ್ ಬಿಡ್ಡಿಂಗ್‌ನಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ್ದು, ಇದರಿಂದ ರೇಷ್ಮೆ ಮಾರುಕಟ್ಟೆಗೆ ಬರುವ ರೇಷ್ಮೆಗೂಡನ್ನು ತೂಕ ಮಾಡಿ ಹರಾಜು ಮಾಡಲಾಗದೆ ಹಲವಾರು ರೈತರು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಪರದಾಡಿದರು. ಮಾರುಕಟ್ಟೆಯಲ್ಲಿ 16 ಲಾಟ್‌ಗಳ ಪೈಕಿ 8 ಲಾಟ್‌ಗಳಿಗೆ ಬಿಡ್ ಕೂಗಿದರು, ಗೂಡು ತೂಕ ಹಾಕಿದ ನಂತರ ಸರ್ವರ್ ಸಮಸ್ಯೆಯಿಂದ 8 ಲಾಟ್ ಗೂಡುಗಳನ್ನು ತೂಕ ಮಾಡಲಾಗದೆ ಸಮಸ್ಯೆ ಎದುರಿಸುವಂತಾಯಿತು.
ಈ ಹಿಂದೆ ಹರಾಜು ಕೂಗಿ ರೇಷ್ಮೆಗೂಡು ಮಾರಾಟ ಮಾಡಲಾಗುತ್ತಿತ್ತು. ರೈತರ ಸಮ್ಮುಖದಲ್ಲೇ ಅತಿ ಹೆಚ್ಚು ದರಕ್ಕೆ ಕೂಗಿದವರಿಗೆ ಗೂಡು ಸಿಗುತ್ತಿತ್ತು. ಇದರಲ್ಲಿ ಪಾರದರ್ಶಕತೆಯಿಲ್ಲದೆ ರೈತರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರ ಆನ್‌ಲೈನ್ ಬಿಡ್ಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಈಗ ಈ ವ್ಯವಸ್ಥೆಯಲ್ಲೂ ಪದೇಪದೆ ತಾಂತ್ರಿಕ ಸಮಸ್ಯೆಯುಂಟಾಗಿ ರೀಲರ್ಸ್ ಮತ್ತು ರೈತರಿಗೆ ನಷ್ಟ ಮತ್ತು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ರೇಷ್ಮೆಗೂಡು ಮಾರಾಟಗಾರರಾದ ಲೋಕೇಶ್, ರಮೇಶ್ ಗೌಡ, ಸೋಮನಾಥ್‌ರೆಡ್ಡಿ, ವೆಂಕಟರೆಡ್ಡಿ, ಮುನಿಯಪ್ಪ, ಶೇಷಾದ್ರಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.
ರೇಷ್ಮೆಗೂಡು ಮಾರಾಟದ ನಂತರ ರೈತರು ಸ್ವಗ್ರಾಮಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾದರೆ, ವ್ಯಾಪಾರಿಗಳು ಸಹ ಖರೀದಿ ಮಾಡಿದ ರೇಷ್ಮೆಗೂಡು ಒಯ್ಯಲಾಗದೆ ಪರದಾಡುವಂತಾಯಿತು.ರೈತರ ಆಕ್ರೋಶದಿಂದ ಎಚ್ಚೆತ್ತ ರೇಷ್ಮೆಗೂಡು ಮಾರುಕಟ್ಟೆ ಸಿಬ್ಬಂದಿ ಸರ್ವರ್ ಸಮಸ್ಯೆ ಸರಿಪಡಿಸಿದರು. ರಾತ್ರಿ 9 ಗಂಟೆವರೆಗೂ ವಹಿವಾಟು ನಡೆಯಿತು.