ಕಿನ್ನಿಗೋಳಿ: ಗೋಳಿಜೋರ ಎಂಬಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ನಿತಿನ್(40) ಎಂಬುವರು ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ಪತ್ನಿ ಉಡುಪಿಯ ಕಟಪಾಡಿಯಲ್ಲಿರುವ ತವರಿಗೆ ತೆರಳಿದ್ದರಿಂದ ಮನೆಯಲ್ಲಿ ತಾಯಿ ಮಾತ್ರ ಇದ್ದರು. ಈ ಸಂದರ್ಭ ನಿತಿನ್ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ನಿತಿನ್ ಎಷ್ಟು ಹೊತ್ತಾದರೂ ಏಳದೇ ಇದ್ದುದನ್ನು ಗಮನಿಸಿದ ತಾಯಿ ಕಿಟಕಿಯಿಂದ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿತಿನ್ ವರ್ಷದ ಹಿಂದೆ ಉಚ್ಚಿಲ ಬಡಾ ಗ್ರಾಪಂ ಪಿಡಿಒ ಕುಶಾಲಿನಿ ಅವರನ್ನು ವಿವಾಹವಾಗಿದ್ದರು. ಲಾಕ್‌ಡೌನ್ ಬಳಿಕ ಕೆಲಸವಿಲ್ಲದೆ ನಿತಿನ್ ಖಿನ್ನತೆಗೆ ಒಳಗಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.