ಶ್ರೀರಂಗಪಟ್ಟಣ: ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥತೆಯಿಂದ ಸೇವೆ ನೀಡುವ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ಹಾಗೂ ಮಹತ್ವಪೂರ್ಣ ಎಂದು ಮಾಜಿ ಶಿಕ್ಷಣ ಸಂಯೋಜಕ ಹಾಗೂ ಅರಕೆರೆ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಹರೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಭಿನ್ನ ಸೇವೆ ನೀಡುತ್ತಿರುವ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸುಸ್ಥಿತಿ ಹಾಗೂ ಪ್ರಜ್ಞಾವಂತಿಕೆಯ ಸಮಾಜ ನಿರ್ಮಿಸಲು ಶಿಕ್ಷಕನ ಪಾತ್ರ ಅತ್ಯಂತ ಪರಿಣಾಮಕಾರಿ. ಆಧುನಿಕತೆ ಹಾಗೂ ವೈಜ್ಞಾನಿಕತೆಯ ಯುಗದಲ್ಲೂ ಗ್ರಾಮೀಣ ವಿದ್ಯಾರ್ಥಿಗಳ ಏಳ್ಗೆಗೆ ನಿಸ್ವಾರ್ಥ ಸೇವೆ ನೀಡಿ ದುಡಿಯುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಕಸಾಪ ಘನತೆಯನ್ನು ಹೆಚ್ಚಿಸಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ.ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಹೇಮಲತಾ ಹರಿಯಾಳ ಕಾರ್ಯಕ್ರಮ ಉದ್ಘಾಟಿಸಿದರು.
ಅರಕೆರೆ ಪ್ರೌಢಶಾಲೆ ಶಿಕ್ಷಕ ಹರೀಶ್, ಹುರುಳಿ ಕ್ಯಾತನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕಿ ಮೇರಿ, ಪಾಲಹಳ್ಳಿ ವಾಹಿನಿ ಪ್ರೌಢಶಾಲೆ ಶಿಕ್ಷಕ ಕರಿಯಪ್ಪ ಲೇಬಗೇರಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಸಾವಿತ್ರಿ, ನೆಲಮನೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ, ಬಾಬುರಾಯನಕೊಪ್ಪಲು ಪ್ರೌಢಶಾಲೆ ಮುಖ್ಯಶಿಕ್ಷಕಿ ಹೇಮಲತಾ ಹರಿಯಾಳ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂದೇಶ್, ಮುಖಂಡರಾದ ಸುಬ್ರಹ್ಮಣ್ಯ, ಒಕ್ಕಲಿಗ ಸಮುದಾಯದ ಮುಖಂಡ ಗೌಡಹಳ್ಳಿ ದೇವರಾಜು, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸರೋಜಮ್ಮ, ಪ್ರೌಢಶಾಲಾ ಶಿಕ್ಷಕರಾದ ಜ್ಞಾನೇಶ್, ನಾಗರಾಜು, ಪುರುಷೋತ್ತಮ, ಸುಮಾ, ರಾಜೇಂದ್ರ, ವನಜಾಕ್ಷಿ, ಪೊನ್ನಸ್ವಾಮಿ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಉಮಾಶಂಕರ್, ಬಸವರಾಜು ಇತರರು ಹಾಜರಿದ್ದರು.