ಜಿಲ್ಲೆ

ಶಿಕ್ಷಕ ವೃತ್ತಿ ಶ್ರೇಷ್ಠ

ಮರಿದೇವ ಹೂಗಾರ

ಹುಬ್ಬಳ್ಳಿ: ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಶ್ರೇಷ್ಠ. ಇಂತ ವೃತ್ತಿಯಲ್ಲಿರುವವರು ಘನತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ನಿವೃತ್ತ ಡಿಡಿಪಿಐ ರುದ್ರಪ್ಪ ಚ. ಹಲಗತ್ತಿ ತಿಳಿಸಿದರು.

ಬಸವ ಕೇಂದ್ರ ವತಿಯಿಂದ ನಗರದಲ್ಲಿ ಲಿಂ.ವೀರಮ್ಮ ಹಾಗೂ ಲಿಂ. ಮುದಿಮಲ್ಲಪ್ಪ ಲಿಂಗಶೆಟ್ಟರ್ ಮುಂಡರಗಿ ಸ್ಮರಣಾರ್ಥ ಇತ್ತೀಚೆಗೆ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡಿದ ಗುರುಗಳು ಜೀವನ ಪೂರ್ತಿ ನೆನಪಿನಲ್ಲಿರುತ್ತಾರೆ. ಪ್ರಾಥಮಿಕ, ಫ್ರೌಢ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ವಿನಂತಿಸಿದ್ದಾರೆ.

ಬಸವ ಕೇಂದ್ರದ ಅಧ್ಯಕ್ಷ ಪ್ರೊ.ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ಜನಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದು ಬರೆಸಬೇಕು. ಗಣತಿದಾರರು ತಕರಾರು ಮಾಡಿದರೆ ಧರ್ಮ ಹಾಗೆ ಬಿಟ್ಟು ಜಾತಿ ಕಾಲಂದಲ್ಲಿ ಲಿಂಗಾಯತ ಬರೆಸಬೇಕು. ನಂತರ ಲಿಂಗಾಯತ-ಪಂಚಮಸಾಲಿ, ಮುಂತಾದ ಉಪಜಾತಿ ನಮೂದಿಸಬೇಕು ಎಂದು ವಿನಂತಿಸಿದರು.

ದತ್ತಿದಾನಿ ವಿದ್ಯಾವತಿ, ಬಸವರಾಜ ಲಿಂಗಶೆಟ್ಟರ್, ಪ್ರಭು ಅಂಗಡಿ, ನೀಲಕಂಠ ಅಸೂಟಿ, ಸುಭಾಷ ಲಿಂಗಶೆಟ್ಟರ್, ಬಸವ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ, ಸೋಹನ ಹೊರಕೇರಿ, ಎಸ್.ವಿ. ಕೊಟಗಿ, ಡಾ. ಪ್ರಕಾಶ ಮುನ್ನೋಳಿ, ಪ್ರೊ.ಎಫ್.ಬಿ. ಸೊರಟೂರ, ಎಂ.ಬಿ. ಕಟ್ಟಿ, ಲಕ್ಷ್ಮೀ ಲಿಂಗಶೆಟ್ಟರ್, ನಿವೇದಿತಾ ಹುಗ್ಗಿಶೆಟ್ಟರ್, ಉಮಾ ಹುಲಿಕಂತಿಮಠ, ಅನಿಲಕುಮಾರ ಲಿಂಗಶೆಟ್ಟರ್, ಡಾ. ಸಿದ್ದಲಿಂಗೇಶ ಸುಳ್ಳದ, ವಾಸಣ್ಣ ಸುಳ್ಳದ, ಸಿದ್ದಲಿಂಗೇಶ ವಾಲಿ, ವೀರಣ್ಣ ಗೊವೇಶ್ವರ, ನೀಲಗಂಗಾ ಹಳ್ಳಾಳ, ಭೂಮಿಕಾ ಲಿಂಗಶೆಟ್ಟರ್ ಇತರರು ಇದ್ದರು.