ಜಮಖಂಡಿ: ಕಳೆದ ಸಾಲಿನಲ್ಲಿ ಜರುಗಿದ ವಾರ್ಷಿಕ ಪರೀಕ್ಷೆಗಳಲ್ಲಿ ಕನ್ನಡ ವಿಷಯಕ್ಕೆ ಪ್ರತಿಶತ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಕನ್ನಡ ಉಪನ್ಯಾಸಕರು ಹಾಗೂ ಕನ್ನಡ ಸಹಶಿಕ್ಷಕರ ಸನ್ಮಾನ, ಬೋಧನಾ ಪರಿಣಿತ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಸಮಾರಂಭವನ್ನು ಜೂ.15 ರಂದು ಬೆಳಗ್ಗೆ 9.30 ಗಂಟೆಗೆ ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಸಂಗಮೇಶ ಮಟೋಳಿ ಹೇಳಿದರು.
ನಗರದ ಕಾನಿಪ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೀರೇಶ್ವರ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಸಾಹಿತ್ಯ ಸೌರಭ ವೇದಿಕೆ ಸಂಯುಕ್ತಾಶ್ರಯದಲ್ಲಿ ಜಮಖಂಡಿ ನಗರದ ಜ್ಞಾನಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದೆ.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸುವರು. ಹೃದಯರೋಗ ತಜ್ಞ ಡಾ. ಎಚ್.ಜಿ. ದಡ್ಡಿ ಅಧ್ಯಕ್ಷತೆ ವಹಿಸುವರು. ಶಾಸಕ ಜಗದೀಶ ಗುಡಗುಂಟಿ ಸಮಾರಂಭವನ್ನು ಉದ್ಘಾಟಿಸುವರು. ಕೆಎಎಸ್ ಅಧಿಕಾರಿ ಬೆಳಗಾವಿಯ ಕಾಡಾ, ಘಟಪ್ರಭಾ ಮತ್ತು ಮಲಪ್ರಭಾ ಯೋಜನೆಗಳ ಉಪ ಆಡಳಿತಾಧಿಕಾರಿ ಪ್ರಶಾಂತ ಹನಗಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಯಲ್ಲಟ್ಟಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ, ಕೆಇಎಸ್ ಅಧಿಕಾರಿ ಶಿವಾನಂದ ಮರೆಗುದ್ದಿ, ಮಧುರಖಂಡಿಯ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ದುಂಡಯ್ಯ ಹಿರೇಮಠ ಅತಿಥಿಗಳಾಗಿ, ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹಾಗೂ ಸುಭಾಸ ಆ್ಸೆಟ್‌ನ ಮಾಲೀಕ ಅಮಿತ ಭೋಸಲೆ ವಿಶೇಷ ಆಮಂತ್ರಿತರಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸಾಹಿತ್ಯ ಸೌರಭ ವೇದಿಕೆಯ ಸಂಚಾಲಕ ಪ್ರೊ. ರಾಜಶೇಖರ ಹೊಸಟ್ಟಿ ಹಾಗೂ ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿದರು.